ಕಾರ್ಯಕರ್ತರು ತಾನೇ ಅಭ್ಯರ್ಥಿ ಎಂದುಕೊಂಡು ಕಾರ್ಯಪ್ರವೃತ್ತರದಲ್ಲಿ ಯಶಸ್ಸು: ವಿ. ಸುನಿಲ್ ಕುಮಾರ್
ವೈದ್ಯಕೀಯ ಕ್ಷೇತ್ರದ ಜನಸೇವೆಯನ್ನು, ರಾಜಕೀಯದಲ್ಲೂ ಮುಂದುವರಿಸಲು ಸಹಕಾರ: ಡಾ. ಧನಂಜಯ ಸರ್ಜಿ
ದೇಶದ ಅಭಿವೃದ್ಧಿಗಾಗಿ, ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಂತೆ ಕಾರ್ಯ: ಎಸ್.ಎಲ್.ಭೋಜೇಗೌಡ

ಕಾರ್ಕಳ : ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾರ್ಕಳ ವಿಧಾನಸಭಾ ಕ್ಷೇತ್ರದ ಜವಾಬ್ದಾರಿ ನಿರ್ವಹಣಾ ಸಭೆಯು ಕಾರ್ಕಳ ಬಿಜೆಪಿ ಮಂಡಲ ವತಿಯಿಂದ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ವಿ. ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ವಿಕಾಸ ಜನಸೇವಾ ಕಚೇರಿಯಲ್ಲಿ ಮೇ 24ರಂದು ಜರುಗಿತು.
ಸಭೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ 209 ಬೂತ್‌ಗಳ ಜವಾಬ್ದಾರಿಯನ್ನು ಹಂಚಲಾಯಿತು. ಈ ಸಂದರ್ಭ ಮಾತನಾಡಿದ ಶಾಸಕ ಸುನಿಲ್ ಕುಮಾರ್, ಭಾರತೀಯ ಜನತಾ ಪಾರ್ಟಿಯ ಪ್ರತಿಯೊಬ್ಬ ಕಾರ್ಯಕರ್ತನು ತಾನೇ ಅಭ್ಯರ್ಥಿಯೆಂದು ಮನಗೊಂಡು, ತಮ್ಮ ತಮ್ಮ ಬೂತ್‌ಗಳಲ್ಲಿ ಪದವೀಧರರು ಹಾಗೂ ಶಿಕ್ಷಕರನ್ನು ಸಂಪರ್ಕಿಸಿ, ಎನ್‌ಡಿಎ ಅಭ್ಯರ್ಥಿಗಳಿಗೆ ಮತದಾನ ಮಾಡುವಂತೆ ಕಾರ್ಯಪ್ರವೃತ್ತಾರಗಬೇಕು ಎಂದರು.
ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಅವರು ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಈವರೆಗೆ ಮಾಡಿದ ಜನಸೇವೆಯನ್ನು ರಾಜಕೀಯ ಕ್ಷೇತ್ರದಲ್ಲಿಯೂ ಮುಂದವರಿಸುವ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಸಹಕರಿಸುವಂತೆ ವಿನಂತಿಸಿದರು.
ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಅವರು ದೇಶದ ಸಮಗ್ರ ಅಭಿವೃದ್ಧಿಗಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕೈಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಶಿಕ್ಷಕರ ಕ್ಷೇತ್ರದಲ್ಲಿ ತಾನು ಈಗಾಗಲೇ ಮಾಡಿರುವ ಹಲವಾರು ಕೆಲಸಗಳನ್ನು ಮುಂದಿರಿಸಿ, ಮುಂದೆಯೂ ಇದೇ ರೀತಿ ಕಾರ್ಯನಿರ್ವಹಿಸಲಿದ್ದು ಈ ನಿಟ್ಟಿನಲ್ಲಿ ಕಾರ್ಯಕರ್ತರೆಲ್ಲರು ಸಹಕರಿಸುವಂತೆ ಮನವಿ ಮಾಡಿಕೊಂಡರು.
ಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷ ಮಣಿರಾಜ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಮಹಾವೀರ್ ಹೆಗ್ಡೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ, ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.