
ಕಾರ್ಕಳ: ಇತಿಹಾಸ ಪ್ರಸಿದ್ಧ ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ 2026ರ ಜಾತ್ರಾ ಮಹೋತ್ಸವವು ಜನವರಿ 25ರಿಂದ 29ರವರೆಗೆ ಭಕ್ತಿಭಾವದೊಂದಿಗೆ ನಡೆಯಲಿದ್ದು, ಈ ಕುರಿತು ಜನವರಿ 15ರಂದು ಕಾರ್ಕಳದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಬಸಿಲಿಕಾ ಧರ್ಮಗುರು ಅಲ್ವಿನ್ ಡಿಸೋಜಾ ಅವರು ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಜನವರಿ 16ರಿಂದ 24ರವರೆಗೆ 9 ದಿನಗಳ ನವದಿನಗಳ ಪ್ರಾರ್ಥನೆ (ನೊವೆನಾ) ನಡೆಸಲಾಗುತ್ತದೆ ಎಂದು ತಿಳಿಸಿದರು.
ಈ ವರ್ಷದ ಮಹೋತ್ಸವಕ್ಕೆ “ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂಬ ಧ್ಯೇಯವಾಕ್ಯವನ್ನು ಆಯ್ಕೆ ಮಾಡಲಾಗಿದ್ದು, ಇದು ಮಾನವೀಯತೆ, ಪ್ರೀತಿ ಹಾಗೂ ಸೇವಾಭಾವನೆಗೆ ಉತ್ತೇಜನ ನೀಡುವ ಸಂದೇಶವನ್ನು ಹೊಂದಿದೆ ಎಂದು ಹೇಳಿದರು.
ಮಹೋತ್ಸವದ ಪ್ರಮುಖ ದಿನಗಳಲ್ಲಿ ವಿವಿಧ ಧರ್ಮಧ್ಯಕ್ಷರು ಹಾಗೂ ಧರ್ಮ ಗುರುಗಳು ಭಾಗವಹಿಸುವ ನಿರೀಕ್ಷೆಯಿದ್ದು ಮಹೋತ್ಸವದ ಅಂಗವಾಗಿ ಜನವರಿ 29ರಂದು ಚರ್ಚ್ ಆವರಣದಲ್ಲಿ ‘ಸತ್ಯ ದರ್ಶನ’ ಎಂಬ ಯಕ್ಷಗಾನ ಬಯಲಾಟವನ್ನು ಆಯೋಜಿಸಲಾಗಿದೆ. ಭಕ್ತರ ಸುರಕ್ಷತೆ ದೃಷ್ಟಿಯಿಂದ 40 ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಆವರಣದ ಸುತ್ತ ಅಳವಡಿಸಲಾಗಿದ್ದು ಸಾಮಾಜಿಕ ಸೇವೆಯ ಭಾಗವಾಗಿ 5ಕ್ಕಿಂತ ಹೆಚ್ಚು ಮನೆಗಳನ್ನು ತಲಾ 10 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿ ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.



















