ಪರಶುರಾಮ ಥೀಮ್ ಪಾರ್ಕ್, ವಿವಾದಿತ ಕೇಂದ್ರವಾಗಿರಿಸುವುದು ಕಾಂಗ್ರೆಸ್ ಉದ್ದೇಶವೇ…?
ಬಿಜೆಪಿ ನೀಡಿದ ಮೂರು ಆಗ್ರಹಗಳಿಗೆ ಈಗಲೂ ಬದ್ಧ….
ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೋಯ್ಲಿ ಆಗ್ರಹ

ಕಾರ್ಕಳ : ಬೈಲೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಪರಶುರಾಮ ಥೀಂ ಪಾರ್ಕ್‌ನ್ನು ಒಂದು ವಿವಾದಿತ ಕೇಂದ್ರವನ್ನಾಗಿ ಜೀವಂತವಾಗಿರಿಸುವುದು ಕಾರ್ಕಳ ಕಾಂಗ್ರೆಸ್‌ನ ರಾಜಕೀಯ ಅಜೆಂಡಾ ಎಂದು ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಹೇಳಿದ್ದಾರೆ.
ಪರಶುರಾಮ ಥೀಂ ಪಾರ್ಕ್ ಒಂದು ಪ್ರವಾಸ ಕೇಂದ್ರ. ಈ ವಿಚಾರದಲ್ಲಿ ಕಳೆದ 15 ತಿಂಗಳಿನಿಂದ ನಾವು ಮಾಡುತ್ತಿರುವ ಮೂರು ಆಗ್ರಹಗಳಿಗೆ ಈ ಕ್ಷಣಕ್ಕೂ ಬದ್ಧರಾಗಿದ್ದೇವೆ ಎಂದಿದ್ದಾರೆ.
ಆಗ್ರಹಗಳು
-ಸ್ಥಗಿತಗೊಂಡ ಥೀಂ ಪಾರ್ಕ್ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿಸಿ.
-ಯೋಜನೆಗೆ ನಿಗಧಿಗೊಳಿಸಿದ ಹಣವನ್ನು ತಕ್ಷಣವೇ ಬಿಡುಗಡೆ ಮಾಡಿ.
-ಥೀಂ ಪಾರ್ಕ್ ಕಾಮಗಾರಿಯಲ್ಲಿ ಅವ್ಯವಹಾರ ಆಗಿದೆ ಎಂದು ಏನು ನೀವು ಆರೋಪಿಸುತ್ತಿದ್ದೀರಿ, ನಿಮ್ಮದೇ ಸರಕಾರ ಇರುವುದರಿಂದ ಈ ಬಗ್ಗೆ ನ್ಯಾಯ ಸಮ್ಮತ ತನಿಖೆಯನ್ನು ತೀವ್ರಗೊಳಿಸಿ.
ರಾಜ್ಯ ಸರಕಾರ ಈ ಮೂರನ್ನೂ ಮಾಡದೇ ಮುಖ್ಯಮಂತ್ರಿಯಾದಿ ಕಾಂಗ್ರೆಸ್‌ನ ಹಿರಿ ಹಾಗೂ ಮರಿ ಪುಡಾರಿಗಳ ವೃಥಾ ಆರೋಪ ಮಾತ್ರ ಹಾಗೆಯೇ ಮುಂದುವರೆದಿದೆ. ಅಷ್ಟಕ್ಕೂ ಕಾರ್ಕಳದ ಕಾಂಗ್ರೆಸ್ ಮುಖಂಡರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿರುವುದಾದರೂ ಏಕೆ ? ಎಂದು ಮೊದಲು ಸ್ಪಷ್ಟಪಡಿಸಬೇಕು. ನಾವು ಈ ಮೂರೂ ಬೇಡಿಕೆ ಇಟ್ಟರೂ ಸಹ ಅದನ್ನು ಈಡೇರಿಸದ ನಿಮ್ಮದೇ ಸರಕಾರದ ವಿರುದ್ಧವೋ? ಅಥವಾ ಸದನಕ್ಕೆ ಮಾನ್ಯ ಮುಖ್ಯಮಂತ್ರಿಗಳು ತಪ್ಪು ಮಾಹಿತಿ ನೀಡಿರುವುದಕ್ಕೋ? ಅಥವಾ ನೀವು ನಿರಂತರವಾಗಿ ಮಾಡುತ್ತಿರುವ ಸುಳ್ಳು ಆಪಾದನೆಗಳು ಫಲ ಕೊಟ್ಟಿಲ್ಲ ಎಂಬ ಹತಾಶೆಗೋ? ಎಂದು ಪ್ರಶ್ನಿಸುವ ರವೀಂದ್ರ ಮೊಯ್ಲಿ ಈ ಎಲ್ಲದಕ್ಕೂ ನೀವು ಕಾರ್ಕಳದ ಸಮಸ್ತ ಜನತೆಗೆ ಉತ್ತರಿಸಬೇಕು ಎಂದು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.








