”ಸಂಪ್ರದಾಯ ಭಗ್ನಗೊಳಿಸಲು ಹೊರಟಿದೆ ರಾಜ್ಯ ಸರ್ಕಾರ:
ಶಾಸಕ ಸುನೀಲ್ ಕುಮಾರ್ ಆಕ್ರೋಶ”

ಬೆಂಗಳೂರು :ರಾಜ್ಯ ಸರ್ಕಾರ ತನ್ನ ಒಳಜಗಳ ಹಾಗೂ ಹೈಕಮಾಂಡ್ ಮೆಚ್ಚಿಸುವುದಕ್ಕೆ ಕರ್ನಾಟಕದ ವಿಧಾನ ಮಂಡಲ ಸಂಸದೀಯ ಇತಿಹಾಸ ಹಾಗೂ ಸಂಪ್ರದಾಯವನ್ನು ಭಗ್ನಗೊಳಿಸಲು ಹೊರಟಿದೆ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಟೀಕಿಸಿದ್ದಾರೆ.
ಸಾಮಾನ್ಯವಾಗಿ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಬಳಿಕ ಕನಿಷ್ಠ ಹತ್ತು ದಿನಗಳ ಕಾಲ ಕಲಾಪ ನಡೆಸಲಾಗುತ್ತಿತ್ತು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಶಾಸಕರು ಕ್ಷೇತ್ರ ಹಾಗೂ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡುವುದು ಹಾಗೂ ಅದಕ್ಕೆ ಮುಖ್ಯಮಂತ್ರಿಗಳು ಸದನದಲ್ಲೇ ಉತ್ತರ ಕೊಡುವುದು ವಾಡಿಕೆ ಹಾಗೂ ಸದನದ ರೀತಿ. ಆದರೆ ವಿಬಿಜಿರಾಮ್ – ಜಿ ವಿಧೇಯಕದ ಬಗ್ಗೆ ಚರ್ಚೆ ನಡೆಸಲು ವಿಶೇಷ ಅಧಿವೇಶನ ಕರೆಯುವ ನೆಪದಲ್ಲಿ ಜಂಟಿ ಅಧಿವೇಶನವನ್ನು ಸೀಮಿತಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಒಳಜಗಳಗಳಿಂದ ಹೈರಾಣಾಗಿರುವ ಅಧಿವೇಶನವನ್ನೂ ನಡೆಸದಷ್ಟು ಹತಾಷ ಹಾಗೂ ದುರ್ಬಲತೆಗೆ ಸರ್ಕಾರ ಸಿಕ್ಕಿದ್ದು ನಾಡಿನ ದುರಂತ.ಅಷ್ಟಕ್ಕೂ ತರಾತುರಿಯಲ್ಲಿ ಜಂಟಿ ಅಧಿವೇಶನ ಕರೆಯುವ ಅನಿವಾರ್ಯತೆ ಏನಿತ್ತು ? ಸದನವನ್ನಾದರೂ ವ್ಯವಸ್ಥಿತವಾಗಿ ನಡೆಸುವುದು ನಿಮ್ಮ ಕರ್ತವ್ಯವಲ್ಲವೇ ? ಎಂದು ಪ್ರಶ್ನಿಸಿದ್ದಾರೆ.
ವಿಬಿಜಿ- ರಾಮ್ ಜಿ ವಿಧೇಯಕದ ಬಗ್ಗೆ ಯಾವುದೇ ವೇದಿಕೆಯಲ್ಲಿ ಬೇಕಾದರೂ ಚರ್ಚೆ ನಡೆಸುವುದಕ್ಕೆ ಬಿಜೆಪಿ ಸಿದ್ದ. ಆದರೆ ಈ ಕಾಯ್ದೆ ವಿರುದ್ಧ ತುರ್ತಾಗಿ ನಿರ್ಣಯ ಪಾಸುಮಾಡಿಕೊಂಡು ರಾಜಕೀಯ ಹೋರಾಟ ಮಾಡಬೇಕೆಂಬುದೇ ಸರ್ಕಾರದ ಉದ್ದೇಶವಾಗಿದೆ. ಶಾಸನ ಸಭೆಯ ರೀತಿ- ರಿವಾಜುಗಳು ಕಾಂಗ್ರೆಸ್ ಹೈಕಮಾಂಡ್ ಆಶಯಕ್ಕೆ ತಕ್ಕಂತೆ ನಡೆಸುವುದು ಸರಿ ಅಲ್ಲ. ಅಧಿವೇಶನದ ಅವಧಿಯನ್ನು ವಿಸ್ತರಿಸುವ ಜತೆಗೆ ನಾಡಿನ ಜ್ವಲಂತ ವಿಚಾರಗಳ ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.



















