
ಕರ್ನಾಟಕ ಸರ್ಕಾರವು ಇತ್ತೀಚೆಗೆ ಘೋಷಿಸಿರುವ ರಾಜ್ಯ ಶಿಕ್ಷಣ ನೀತಿಯಲ್ಲಿ ಕಡಿಮೆ ಆದಾಯ ಬರುವ ಮುಸ್ಲಿಂ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಆರ್ಥಿಕ ಬೆಂಬಲ ನೀಡುವುದು ಹಾಗೂ ಗ್ರಾಮೀಣ ಮುಸ್ಲಿಂ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ನೀಡುವ ಕುರಿತು ಉಲ್ಲೇಖ ಮಾಡಿರುವುದು ಹಿಂದೂ ಸಮಾಜದ ದೃಷ್ಟಿಯಿಂದ ಗಂಭೀರ ವಿಷಯವಾಗಿದೆ. ಸಮಾಜದಲ್ಲಿ ಬಡವರು ಕೇವಲ ಮುಸ್ಲಿಂ ಸಮುದಾಯದಲ್ಲೇ ಇರುವುದಿಲ್ಲ. ಹಿಂದೂ ಸಮಾಜದಲ್ಲಿಯೂ ಅನೇಕ ಬಡ ಕುಟುಂಬಗಳು, ಹಿಂದುಳಿದ ವರ್ಗಗಳು, ಗ್ರಾಮೀಣ ಬಡ ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಹೋರಾಡುತ್ತಿದ್ದಾರೆ. ಆದರೆ ಇವರಿಗೆ ಸಮಾನ ಆರ್ಥಿಕ ಬೆಂಬಲ ನೀಡದೇ ಕೇವಲ ಮುಸ್ಲಿಂ ವಿದ್ಯಾರ್ಥಿಗಳಿಗೆ ಮಾತ್ರ ಆದ್ಯತೆ ನೀಡುವುದು ಸ್ಪಷ್ಟವಾದ ಧರ್ಮಪರ ಓಲೈಕೆ ಹಾಗೂ ಮತಬ್ಯಾಂಕ್ ರಾಜಕಾರಣವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಮೋಹನ ಗೌಡ ಟೀಕಿಸಿದ್ದಾರೆ.
ಮೋಹನ ಗೌಡ ಮುಂದುವರೆಸಿ, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಿರ್ಲಕ್ಷಿಸಿ, ತನ್ನದೇ ಪ್ರತ್ಯೇಕ ರಾಜ್ಯ ಶಿಕ್ಷಣ ನೀತಿ ರೂಪಿಸುವ ಮೂಲಕ ಮುಸ್ಲಿಂ ಸಮುದಾಯಕ್ಕೆ ಮಾತ್ರ ವಿಶೇಷ ಸೌಲಭ್ಯ ನೀಡುವಂತಾಗಿದೆ. ಇದು ಸಂವಿಧಾನದ ಸಮಾನತೆಯ ಹಕ್ಕು ತತ್ವವನ್ನು ಉಲ್ಲಂಘಿಸುವಂತಿದೆ. ಹಿಂದೂ ಜನಜಾಗೃತಿ ಸಮಿತಿ ಈ ಭೇದಭಾವ ನೀತಿಯನ್ನು ತೀವ್ರವಾಗಿ ಖಂಡಿಸುತ್ತಿದ್ದು, ರಾಜ್ಯ ಸರ್ಕಾರವು ಎಲ್ಲ ಬಡ ವಿದ್ಯಾರ್ಥಿಗಳಿಗೆ ಧರ್ಮ, ಜಾತಿ, ಪಂಥದ ಭೇದವಿಲ್ಲದೆ ಸಮಾನ ಆರ್ಥಿಕ ಬೆಂಬಲ ನೀಡಬೇಕು, ಒಂದೇ ಸಮುದಾಯದ ಓಲೈಕೆ ಮಾಡುವ ರಾಜ್ಯ ಶಿಕ್ಷಣ ನೀತಿಯನ್ನು ಹಿಂಪಡೆಯಬೇಕು ಮತ್ತು ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಬೇಕೆಂದು ಆಗ್ರಹಿಸುತ್ತದೆ ಎಂದರು. ಇಲ್ಲದಿದ್ದಲ್ಲಿ ಹಿಂದೂ ಸಮಾಜವು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಈ ಅನ್ಯಾಯದ ವಿರುದ್ಧ ಬೃಹತ್ ಹೋರಾಟ ಹಮ್ಮಿಕೊಳ್ಳಲಿ ಎಂದು ಮೋಹನ ಗೌಡ,ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.