
ಮುಂಡ್ಕೂರು:- ಉತ್ತಮ ಸಾಹಿತ್ಯದ ಪುಸ್ತಕಗಳನ್ನು ಓದುವುದರಿಂದ ಹಿತ ಮತ್ತು ಅಹಿತದ ಬಗ್ಗೆ ಅರಿವನ್ನು ಮೂಡಿಸಿ ಬದುಕಿನ ಸನ್ಮಾರ್ಗದ ನಡೆಗೆ ನೆರವಾಗುತ್ತದೆ. ಓದುವ ಹವ್ಯಾಸವನ್ನು ರೂಢಿಸಿಕೊಂಡಾಗ ಭವಿಷ್ಯ ಉಜ್ವಲವಾಗುತ್ತದೆ. ಅದ್ದರಿಂದ ವಿದ್ಯಾರ್ಥಿಗಳು ನಿರಂತರ ಮೌಲ್ಯಯುತ ಪುಸ್ತಕಗಳನ್ನು ಓದುವ ಜ್ಞಾನದಾಹಿಗಳಾಗಬೇಕು ಎಂದು ಕಾರ್ಕಳ ತಾಲೂಕು ಇಪ್ಪತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಹಿರಿಯ ಜಾನಪದ ವಿದ್ವಾಂಸರಾದ ಕೊಳಕೆ ಇರ್ವತ್ತೂರು ಗುಣಪಾಲ ಕಡಂಬ ಹೇಳಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಘಟಕದ ವತಿಯಿಂದ ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನಲ್ಲಿ ನಡೆದ ‘ವಿದ್ಯಾರ್ಥಿಗಳೆಡೆಗೆ ಪುಸ್ತಕದ ನಡಿಗೆ” ವರ್ಷದ ಸರಣಿ ಕಾರ್ಯಕ್ರಮ “ಕನ್ನಡ ಡಿಂಡಿಮ” ದ ಉದ್ಘಾಟನಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಸಂಚಾಲಕರಾದ ಡಾ ಪಿ ಬಾಲಕೃಷ್ಣ ಆಳ್ವರು ಪುಸ್ತಕಗಳನ್ನು ಓದುವ ಹವ್ಯಾಸವೇ ಜ್ಞಾನದ ತಳಹದಿ.ಶ್ರದ್ಧೆಯ ಅಧ್ಯಯನವೇ ಅರಿವಿಗೆ ದಾರಿ. ವಿದ್ಯಾರ್ಥಿಗಳು ಉತ್ತಮ ಪುಸ್ತಕಗಳನ್ನು ಓದುವುದರಲ್ಲಿ ನಿರತರಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಫೆಡರೇಷನ್ ಆಫ್ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ ಅಸೋಸಿಯೇಷನ್ ಬೆಂಗಳೂರು ಇದರ ಅಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿ ಬಜಗೋಳಿಯವರು ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಲ್ಲಿರುವ ಗಟ್ಟಿತನ ಬದುಕಿನಲ್ಲಿ ಯಶಸ್ವಿಯಾಗಲು ನೆರವಾಗುತ್ತದೆ. ವಿದ್ಯಾರ್ಥಿಗಳು ಕನ್ನಡದ ಪ್ರೀತಿಯೊಂದಿಗೆ ಪುಸ್ತಕದ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಎಂದರು.ಕನ್ನಡ ಮಾಧ್ಯಮದಲ್ಲಿ ಓದಿ 625ಕ್ಕೆ 625 ಅಂಕಗಳಿಸಿದ್ದ ಶ್ರೇಯಾ ರವೀಂದ್ರ ಶೆಟ್ಟಿಯವರು ಮಾತನಾಡಿ ಕನ್ನಡ ಮಾಧ್ಯಮದ ಕಲಿಕೆ ಜೀವನದ ಎಲ್ಲಾ ರೀತಿಯ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಶಕ್ತಿ ನೀಡುತ್ತದೆ ಎಂದರು.
ವೇದಿಕೆಯಲ್ಲಿ ಪ್ರಾಚಾರ್ಯ ಮಾಲ್ತೇಶ ಇಂಗಳಕಿ, ಹಿರಿಯ ಶಿಕ್ಷಕಿ ಸವಿತಾ, ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ದಿನಕರ ಕುಂಬಾಶಿ, ಹಳೆ ವಿದ್ಯಾರ್ಥಿ ಸನ್ನಿದಿ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸುಧಾಕರ ಪೊಸ್ರಾಲ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಶಾನ್ವಿ "ನಾನು ಮೆಚ್ವಿದ ಪುಸ್ತಕ" ವಿಷಯದ ಬಗ್ಗೆ ತನ್ನ ಅನಿಸಿಕೆಗಳನ್ನು ಹಂಚಿಕೊಂಡರು. ಸಹಶಿಕ್ಷಕಿ ವಿದ್ಯಾ ಶೆಡಿಗೇರಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.ಪ್ರಭಾಕರ ಶೆಟ್ಟಿ ಪ್ತಸ್ತಾವನೆಯೊಂದಿಗೆ ಸ್ವಾಗತಿಸಿದರು.ಕಸಾಪದ ಜಿಲ್ಲಾ ಪ್ರತಿನಿಧಿ ಉಪನ್ಯಾಸಕರಾದ ಪ್ರಕಾಶ್ ನಾಯ್ಕ ನಿರೂಪಿಸಿ ಗೌರವ ಕೋಶಾಧಿಕಾರಿ ಅರುಣ್ ರಾವ್ ವಂದಿಸಿದರು