
ಮುಲ್ಕಿ: ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಹಾಗೂ ಅನುವಂಶಿಕ ಮೊಕ್ತೇಸರ ವಾಸುದೇವ ಅಸ್ರಣ್ಣರ ಸಹೋದರ ಹರಿನಾರಾಯಣ ದಾಸ ಅಸ್ರಣ್ಣ ಅವರು ದೇವಳದಲ್ಲಿನ ಸೇವೆಗಳ ದರ ಏರಿಕೆಯಲ್ಲಿ ರಾಜ್ಯ ಸರ್ಕಾರ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯರ ಯಾವುದೇ ಪಾತ್ರವಿಲ್ಲ. ಕಟೀಲು ದೇವಾಲಯದ ಸೇವೆಗಳ ದರ ಪರಿಷ್ಕರಣೆ ರಾಜ್ಯ ಸರ್ಕಾರದ ನಿರ್ದೇಶನದಂತೆ ನಡೆದಿದ್ದು ದೇವಸ್ಥಾನದ ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದೆ ಎಂದು ಸುಳ್ಳು ಸುದ್ದಿ ಪ್ರಚಾರ ಮಾಡುತ್ತಾ ದೇವಸ್ಥಾನ ಮತ್ತು ರಾಜ್ಯ ಸರ್ಕಾರಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ದೇವಸ್ಥಾನದ ಆಡಳಿತ ಮಂಡಳಿ ಸೇವೆಗಳ ದರವನ್ನು ಪರಿಷ್ಕರಿಸಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ದೇವಸ್ಥಾನಕ್ಕೆ ಕಾಣಿಕೆ ಹಾಕಿದರೆ ಅದು ಸರಕಾರದ ಖಜಾನೆಗೆ ಸೇರುತ್ತದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಸಂಗ್ರಹಿಸುವ ನಿಟ್ಟಿನಲ್ಲಿ ದೇವಸ್ಥಾನದ ಸೇವಾ ದರಗಳನ್ನು ಪರಿಷ್ಕರಿಸಲಾಗಿದೆ. ಹೀಗಾಗಿ ದೇವಸ್ಥಾನಕ್ಕೆ ಕೇವಲ ಹೂವು ಮತ್ತು ಎಳನೀರು ನೀಡಿದರೆ ಸಾಕು ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ಕೆಡಿಸುವ ಹುನ್ನಾರದ ಭಾಗವಾಗಿ ಈ ಅಪಪ್ರಚಾರ ಮಾಡುತ್ತಿರುವಂತೆ ಕಾಣುತ್ತಿದೆ. ಇದೆಲ್ಲ ಸುಳ್ಳು, ದೇವಸ್ಥಾನದಲ್ಲಿ ಸಂಗ್ರಹವಾಗುವ ಹಣ ದೇವಸ್ಥಾನದ ಹೆಸರಿನಲ್ಲಿ ಅದರ ಬ್ಯಾಂಕ್ ಖಾತೆಯಲ್ಲಿ ಇರುತ್ತದೆ. ಅದನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತದೆ. ಸರ್ಕಾರಕ್ಕೆ ಯಾವುದೇ ಹಣವನ್ನು ನೀಡುತ್ತಿಲ್ಲ. ಕಟೀಲು ದೇವಸ್ಥಾನದ ಆಡಳಿತ ಮಂಡಳಿಯು ಸ್ಥಳೀಯ ಮಾರುಕಟ್ಟೆಯ ದರಕ್ಕೆ ಅನುಗುಣವಾಗಿ ದೇವಸ್ಥಾನದ ಸೇವೆಗಳ ದರವನ್ನು ಪ್ರತಿ ಸಲದಂತೆ ಈ ಬಾರಿಯೂ ಪರಿಷ್ಕರಿಸಿದೆ. ಇದರಲ್ಲಿ ಬೇರೆ ಯಾರದು ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.






















































