ಆಧುನಿಕ ಸ್ಪರ್ಶದೊಂದಿಗೆ, ನಡೆಯುವ ನಮ್ಮೂರಿನ ಕಂಬಳ ದೇಶ – ವಿದೇಶದಲ್ಲಿಯೇ ಪ್ರಸಿದ್ದಿ – ಶಾಸಕ ವಿ.ಸುನಿಲ್ ಕುಮಾರ್

ಕಾರ್ಕಳ: ಕಂಬಳ ಕ್ರೀಡೆ ಒಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿ ನಾಡಿನಲ್ಲೇ ಪ್ರಸಿದ್ಧ ಪಡೆದಿದೆ. ಕಂಬಳ ಕ್ರೀಡೆಯು ಜಾತಿ- ಮತ- ಪಂಥವನ್ನು ಮೀರಿದ್ದು. ಎಲ್ಲರೂ ಒಗ್ಗೂಡಿ ಇದನ್ನು ಸಾಂಸ್ಕೃತಿಕ ಉತ್ಸವವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಕಂಬಳ ಇಲ್ಲಿನ ಪ್ರತಿಷ್ಠೆ ಹಾಗೂ ಮರ್ಯಾದೆಯ ವಿಚಾರ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.
ಅವರು ಶನಿವಾರ ಸಂಜೆ ಕಾರ್ಕಳ ಮಿಯ್ಯಾರು ಕಂಬಳ ಸಮಿತಿ, ನವೋದಯ ಗ್ರಾಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಆಶ್ರಯದಲ್ಲಿ ನಡೆದ 21ನೇ ವರ್ಷದ ಮಿಯ್ಯಾರು ಲವ- ಕುಶ ಜೋಡುಕರೆ ಕಂಬಳದ ಸಭಾ ಕಾರ್ತಕ್ರಮದಲ್ಲಿ ಪಾಲ್ಗೊಂಡು, ಸಮ್ಮಾನ ಸ್ವೀಕರಿಸಿ, ಮಾತನಾಡಿದರು.

ಕೃಷಿಗೆ ವಿಶ್ರಾಂತಿಯ ಸಮಯದಲ್ಲಿ ನಡೆಯುವ ಈ ಜಾನಪದ ಕ್ರೀಡೆ ಕರಾವಳಿಯಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ದೇಶದಲ್ಲಿ ಸಾಂಸ್ಕೃತಿಕ ಪುನರುತ್ಥಾನದ ಜತೆಯಲ್ಲಿ ಧಾರ್ಮಿಕತೆ ಜಾಗೃತವಾಗಿ ಜಗತ್ತಿನಲ್ಲೇ ದೇಶ ಗುರುತಿಸುವಂತಾಗಿದೆ. ಅಚ್ಚುಕಟ್ಟಿನ ವ್ಯವಸ್ಥೆಯಲ್ಲಿ ದ.ಕ, ಉಡುಪಿ ಅಗ್ರ ಸ್ಥಾನದಲ್ಲಿದೆ. ಕಾಲಕಾಲಕ್ಕೆ ಆಧುನಿಕತೆಯನ್ನು ಅಳವಡಿಸಿಕೊಂಡು ಆಯೋಜಿಸುವಲ್ಲಿ ಜಾಣ ಜನರು ಇಲ್ಲಿದ್ದಾರೆ. ಕಂಬಳ ಬರೀ ಕ್ರೀಡೆಯಾಗಿ ಉಳಿಯದೆ ಅದೊಂದು ಸಂಸ್ಕೃತಿಯಾಗಿ ತುಳುನಾಡಿನಲ್ಲಿ ನೆಲೆಗೊಂಡಿದೆ ಎಂದವರು ಹೇಳಿದರು.
ಕಾರ್ಕಳ ಶಾಸಕ, ಕಂಬಳ ಸಮಿತಿಯ ಅಧ್ಯಕ್ಷ ವಿ.ಸುನಿಲ್ ಕುಮಾರ್ ಮಾತನಾಡಿ, ನಮ್ಮೂರಿನ ಕಂಬಳ ಪ್ರಸಿದ್ದಿ ಪಡೆದು ದೇಶದ ಜನತೆಯ ಗಮನ ಸೆಳೆಯುತ್ತಿದೆ. ಮನೆಯ ಮಗುವಿನಂತೆ ಕೋಣಗಳನ್ನು ಸಾಕಿ ಬೆಳೆಸಿಕೊಂಡು ಕಂಬಳವನ್ನು ಉಳಿಸುವ ಪ್ರಯತ್ನ ಅವಿಭಜಿತ ದ.ಕ., ಉಡುಪಿ ಜಿಲ್ಲೆಯ ಜನ ಮಾಡುತ್ತಿದ್ದಾರೆ. ಆಧುನಿಕ ಸ್ಪರ್ಶದ ಜತೆಯಲ್ಲಿ ನಡೆಯುವ ಕಂಬಳ ದೇಶ ವಿದೇಶದಲ್ಲೇ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಪ್ರವಾಸೋದ್ಯಮ ದೃಷ್ಟಿಯಿಂದ ಕಂಬಳ ಆಕರ್ಷಣಿಯವಾಗಿದೆ. ಸರಕಾರ ಹೆಚ್ಚಿನ ಅನುದಾನ ಕಂಬಳಕ್ಕೆ ಕೊಟ್ಟಾಗ ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯ. ಸರಕಾರ ಎಲ್ಲ ಆತಂಕವನ್ನು ಮೀರಿ ಕಂಬಳಕ್ಕೆ ಕೊಟ್ಟ ಪ್ರೋತ್ಸಾಹದಿಂದ ಕಂಬಳ ಇಂದಿಗೂ ಯಶಸ್ವಿಯಾಗಿ ನಡೆಯುತ್ತ ಬಂದಿದೆ ಎಂದರು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರನ್ನು ಸಮ್ಮಾನಿಸಲಾಯಿತು. ಜತೆಯಲ್ಲಿ ಕಂಬಳ ಸಾಧಕರು, ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಜೀವನ್‌ದಾಸ್ ಅಡ್ಯಂತಾಯ, ಸಂಘಟನಾ ಪ್ರಧಾನ ಕಾರ‌್ಯದರ್ಶಿ ಕೆ. ಗುಣಪಾಲ ಕಡಂಬ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ, ಜಿಲ್ಲಾ ಕರಾವಳಿ ಕಾವಲು ಪಡೆಯ ಎಸ್ಪಿ ಮಿಥುನ್ ಎಚ್. ಪಿ., ಎಎಸ್ಪಿ ರಾಘವೇಂದ್ರ, ಬೈಂದೂರಿನ ದೀಪಕ್ ಶೆಟ್ಟಿ, ಅಜಿತ್ ಹೆಗ್ಡೆ, ಶುಭದ ರಾವ್, ಸುನೀಲ್ ಬಜಗೋಳಿ, ಅಂತೋನಿ ಡಿಸೋಜ ನಕ್ರೆ, ಅವಿನಾಶ್ ಶೆಟ್ಟಿ, ಮಲ್ಲಿಕಾ ಯಶವಂತ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಇಸ್ರೊ ಮಾಜಿ ವಿಜ್ಞಾನಿ ಜನಾರ್ದನ ಇಡ್ಯಾ, ಕಾರ್ಕಳ ಕಸಾಪ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ, ನವೀನ್ ನಾಯಕ್, ಮತ್ತಿತರರು ಉಪಸ್ಥಿತರಿದ್ದರು.
ಕಂಗಿನಮನೆ ವಿಜಯಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
