
ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯಲ್ಲಿ ನಡೆದ ಉದ್ಯೋಗ ಮೇಳದ ವೇದಿಕೆಯಲ್ಲಿ ಮಾತನಾಡಿದ್ದು ಈ ವೇಳೆ ರಾಜ್ಯದಲ್ಲಿನ ನಮ್ಮ ಸರ್ಕಾರ ತೆಗೆಯಲು ಪ್ಲ್ಯಾನ್ ನಡೆದಿದ್ದು, ಒಗ್ಗಟ್ಟಾಗಿ ಇರದೇ ಹೋದರೆ ಸರ್ಕಾರ ಉರುಳಬಹುದು ಎಂದು ಸಿಎಂ ಹಾಗೂ ಡಿಸಿಎಂಗೆ ಎಚ್ಚರಿಕೆ ನೀಡಿದರು.
ಮೋದಿ, ಅಮಿತ್ ಶಾ ನಿಮ್ಮ ಸರ್ಕಾರ ಬೀಳಿಸುತ್ತಾರೆ. ನಿಮ್ಮಲ್ಲಿ ಏನೇ ಮನಸ್ಥಾಪವಿದ್ದರೂ ಒಗ್ಗಟ್ಟಾಗಿರಬೇಕು. ಮೋದಿ ಸರ್ಕಾರ ಈ ಭಾಗಕ್ಕೆ ಯಾವುದೇ ಕೆಲಸ ಮಾಡಿಲ್ಲ. ನಾನು 1 ವರ್ಷದಲ್ಲಿ ಮಾಡಿದ ಕೆಲಸ, ಅವರು 10 ವರ್ಷವಾದರೂ ಮಾಡುವುದಿಲ್ಲ. ಅವರು ಒಂದೇ ಒಂದು ರೈಲು ಸಹ ಇಲ್ಲಿಯವರೆಗೆ ಬಿಟ್ಟಿಲ್ಲ. ಕಲಬುರಗಿ ಏರ್ಪೋರ್ಟ್ಗೆ ಸರ್ಕಾರದಿಂದಲೇ ಜಮೀನು ಹಾಗೂ ಹಣ ಕೊಟ್ಟಿದ್ದೇವೆ. ಆದರೆ ನಮಗೆ ಒಂದು ವಿಮಾನ ಸಹ ಬರಲ್ಲ. ಅವರ ಕಿವಿ ಹಿಂಡಿ ಒಂದೆರಡು ಫ್ಲೈಟ್ ಇಲ್ಲಿಗೆ ಕೊಡಬೇಕಾಗಿದೆ.
ಇಡಿ, ಐಟಿ ಬಿಟ್ಟರೇ ಕಾಂಗ್ರೆಸ್ ಬಗ್ಗುತ್ತದೆ ಎಂದು ಅಂದುಕೊಂಡಿದ್ದೀರಿ. ಆದರೆ ಕಾಂಗ್ರೆಸ್ ಯಾವತ್ತು ಬಗ್ಗೋದಿಲ್ಲ. ರಾಹುಲ್ ಗಾಂಧಿ ಯಾವುದಕ್ಕೂ ಹೆದರುವುದಿಲ್ಲ. ಗಾಂಧಿ ಕುಟುಂಬ ದೇಶಕ್ಕಾಗಿ ಪ್ರಾಣ ಕೊಟ್ಟಿದೆ. ಮೋದಿಯವರೇ ನೀವೇನು ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.



