
ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿಧಾನಸೌಧದಲ್ಲಿ ಶನಿವಾರ ಸರ್ವಜ್ಞನಗರ ಕ್ಷೇತ್ರದ ಅಭಿವೃದ್ಧಿ ಹಾಗೂ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು ಈ ವೇಳೆ ದಸರಾ ಹಬ್ಬ ಹಾಗೂ ರಜೆಗಳ ಹಿನ್ನೆಲೆ 5 ಪಾಲಿಕೆಗಳ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ಇದರ ನಿವಾರಣೆಗೆ ಅಭಿಯಾನ ಕೈಗೊಂಡಿದ್ದು, ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರನ್ನು ಸ್ವಚ್ಛವಾಗಿಡಲು ಎಲ್ಲೆಂದರಲ್ಲಿ ಸುರಿದಿರುವ ಕಟ್ಟಡ ತಾಜ್ಯ, ಕಸದ ರಾಶಿಯನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಲು ಡಬ್ಬಿಗಳು ಇಟ್ಟಿರುವ ಬಗ್ಗೆ ಪಾಲಿಕೆಗಳ ಆಯುಕ್ತರಿಂದ ವರದಿ ಕೇಳಿದ್ದೇನೆ. ಜಿಬಿಎ ಹಾಗೂ ಐದು ಪಾಲಿಕೆಗಳ ಆಯುಕ್ತರು ಸೇರಿ ಇತರೆ ನಗರಗಳಲ್ಲಿ ಯಾವ ರೀತಿ ವ್ಯವಸ್ಥೆ ಇದೆ ಎಂಬುದನ್ನು ತಿಳಿದುಕೊಂಡು ವರದಿ ನೀಡುವಂತೆ ತಿಳಿಸಿದ್ದೇನೆ. ಎಲ್ಲೆಂದರಲ್ಲಿ ಕಸ ಬಿದ್ದಿದ್ದರೆ ಅದರ ಫೋಟೋ ತೆಗೆದು ಪಾಲಿಕೆಗಳು ಸೂಚಿಸಿರುವ ದೂರವಾಣಿ ಸಂಖ್ಯೆಗೆ ಕಳುಹಿಸಬೇಕು ಎಂದು ಹೇಳಿದರು.



















