
ಬೆಂಗಳೂರು: ಪಶ್ಚಿಮ ಘಟ್ಟವನ್ನು ಸಂರಕ್ಷಿಸುವ ನಿಟ್ಟಿನಲ್ಲಿ, ಈ ವ್ಯಾಪ್ತಿಯ ಭೂ ಉಪಯೋಗ ಕುರಿತು ಹೊಸ ನಿಯಮಾವಳಿ ರೂಪಿಸುವವರೆಗೆ ಎಲ್ಲ ಭೂ ಪರಿವರ್ತನೆ ಪ್ರಸ್ತಾವನೆಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಸ್ತಾವನೆ ಸಲ್ಲಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದ್ದು ಆದ್ದರಿಂದ ಈ ಭಾಗದಲ್ಲಿ ಕೃಷಿಯೇತರ ಚಟುವಟಿಕೆಗೆ ತಾತ್ಕಾಲಿಕವಾಗಿ ತಡೆ ಬೀಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿರುವ ಟಿಪ್ಪಣಿಯಲ್ಲಿ ಈ ಬಗ್ಗೆ ಉಲ್ಲೇಖವಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯಲ್ಲಿ ಭೂ-ಉಪಯೋಗದ ರೀತಿ ಮತ್ತು ಭೂ ಪರಿವರ್ತನೆ ಸಹಿತ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ಇಲಾಖೆ, ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಮನ್ವಯದಲ್ಲಿ ಭೂ ಉಪಯೋಗ ಸ್ವರೂಪದ ಬಗ್ಗೆ ಹೊಸ ವಲಯ ನಿಯಂತ್ರಣ ಮತ್ತು ಮಾಸ್ಟರ್ ಯೋಜನೆ ರೂಪಿಸುವವರೆಗೆ ಪಶ್ಚಿಮ ಘಟ್ಟ ವ್ಯಾಪ್ತಿಗೆ ಒಳ ಪಡುವ ಎಲ್ಲ ಭೂ ಪರಿವರ್ತನೆ ಪ್ರಸ್ತಾವನೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವುದು ಸೂಕ್ತವೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದು, ಕೂಡಲೇ ವಿವಿಧ ಇಲಾಖೆ ಸಮನ್ವಯದೊಂದಿಗೆ ಸ್ಪಷ್ಟ ಅಭಿಪ್ರಾಯದೊಂದಿಗೆ ಪ್ರಸ್ತಾವನೆ ಸಲ್ಲಿಸಲು ಕ್ರಮ ತೆಗೆದುಕೊಳ್ಳುವಂತೆ ಸಚಿವರು ಸೂಚಿಸಿದ್ದಾರೆ.













