ಉಡುಪಿ: ಕರಾವಳಿಯ ಪಶ್ಚಿಮ ಘಟ್ಟದ ದಟ್ಟ ಕಾಡಿನಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡ ನಕ್ಸಲ್ ನಿಗ್ರಹ ಪಡೆ ಗುಂಡಿಗೆ ಬಲಿಯಾದ ಸಂದರ್ಭದಲ್ಲಿ ಆತನ ಜತೆ ಇದ್ದ ಇತರೆ ನಕ್ಸಲರು ಪರಾರಿಯಾಗಿದ್ದು ಇದೀಗ ಶೋಧ ಕಾರ್ಯ ಮುಂದುವರೆದಿದೆ.
ತಪ್ಪಿಸಿಕೊಂಡ ನಕ್ಸಲರ ಜಾಡು ಹಿಡಿದು ಶೋಧ ಕಾರ್ಯ ತೀವ್ರಗೊಂಡಿದ್ದು ಹಿರಿಯ ಎಎನ್ಎಫ್ ಅಧಿಕಾರಿಗಳು ಕಬ್ಬಿನಾಲೆ, ಪೀತಬೈಲ್, ನಾಡಪಾಲ್, ಕೂಡ್ಲು ಅರಣ್ಯವ್ಯಾಪ್ತಿಯಲ್ಲೇ ಬೀಡುಬಿಟ್ಟಿದ್ದಾರೆ. ಕಾಡಿಗೆ ಹೋಗದಂತೆ ಸ್ಥಳೀಯ ನಿವಾಸಿಗಳಿಗೆ ಸೂಚಿಸಲಾಗಿದೆ.
ಕಬ್ಬಿನಾಲೆ ಅರಣ್ಯ ವ್ಯಾಪ್ತಿಗೆ ಪ್ರವೇಶಿಸುವ ಮುನ್ನ ನಕ್ಸಲರು ಉಡುಪಿ ಜಿಲ್ಲೆಯ ಈದು ಗ್ರಾಮ ದಕ್ಷಿಣ ಕನ್ನಡ ಜಿಲ್ಲೆಯ ಕುತ್ಲುರು ಮಲೆ ಪ್ರದೇಶ, ಕೊಡುಗು ದಕ್ಷಿಣ ಕನ್ನಡ ಗಡಿ ಪ್ರದೇಶದಲ್ಲಿ ಪ್ರತ್ಯಕ್ಷ ಗೊಂಡಿದ್ದು ಈ ಕಾರಣದಿಂದಾಗಿ ಈ ಭಾಗದ ಕಾಡುಗಳನ್ನೂ ಎಎನ್ಎಫ್ ಅಧಿಕಾರಿಗಳು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ನಕ್ಸಲ್ ಚಲನವಲನದ ಮೇಲೆ ಹದ್ದಿನ ಕಣ್ಣಿರಿಸಿದ್ದು ಈ ನಡುವೆ ನಕ್ಸಲರ ಶರಣಾಗತಿಗೂ ಸೂಚನೆ ನೀಡಲಾಗಿದೆ. ಶರಣಾಗದೆ ಹೋದರೆ ಕರಾವಳಿಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮತ್ತೆ ಗುಂಡಿನ ಸದ್ದು ಮರುಕಳಿಸುವ ಸಾಧ್ಯತೆಯಿದೆ.
ಡಿಸಿಎಂ ಡಿಕೆ ಶಿವಕುಮಾರ್ ಅವರು ಗುರುವಾರ ಕೊಲ್ಲೂರಿಗೆ ಭೇಟಿ ನೀಡಿ ಈ ಎನ್ಕೌಂಟರ್ ಕುರಿತು ಪ್ರತಿಕ್ರಿಯಿಸಿದ್ದು ರಾಜ್ಯದ ಜನರನ್ನ ರಕ್ಷಣೆ ಮಾಡುವುದು ನಮ್ಮ ಕೆಲಸವಾಗಿದೆ. ಕೇರಳ, ಕರ್ನಾಟಕದಲ್ಲಿ ನಕ್ಸಲ್ ಪ್ಯಾಕೇಜ್ ಘೋಷಣೆ ಮಾಡಿದ್ದೇವೆ. ಎಲ್ಲಾ ಮಾಹಿತಿಗಳನ್ನೂ ಸಾರ್ವಜನಿಕವಾಗಿ ಹಂಚಿಕೊಂಡಾಗಿದೆ. ಪೊಲೀಸರು ಅವರ ಕರ್ತವ್ಯ ಮಾಡಿದ್ದಾರೆ ಎಂದು ಗೃಹ ಇಲಾಖೆಯ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ