“ಓಲೈಕೆ ರಾಜಕಾರಣದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಗೃಹ ಇಲಾಖೆಯ ದಕ್ಷತೆ ಪಾತಾಳಕ್ಕೆ”
ಶಾಸಕ ವಿ ಸುನಿಲ್ ಕುಮಾರ್ ಆಕ್ರೋಶ

ಹದೆಗೆಟ್ಟ ಕಾನೂನು ವ್ಯವಸ್ಥೆ ಒಂದು ರಾಜ್ಯ ಅನಭಿವೃದ್ಧಿಯ ಕೂಪದಲ್ಲಿ ಮುಳುಗುತ್ತಿರುವುದರ ಸಂಕೇತ. ರಾಜ್ಯದಲ್ಲಿ ಮಂಗಳವಾರ ತಡರಾತ್ರಿ ನಡೆದ ಎನ್ ಐಎ ದಾಳಿ ಕಾನೂನು ಸುವ್ಯವಸ್ಥೆ ಹಾಗೂ ಗೃಹ ಇಲಾಖೆಯ ದಕ್ಷತೆ ಪಾತಾಳ ತಲುಪಿರುವುದನ್ನು ಬೆತ್ತಲೆಗೊಳಿಸಿದೆ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಟೀಕಿಸಿದ್ದಾರೆ.
ರಾಜ್ಯದಲ್ಲಿ ನಡೆದ ಎನ್ ಐಎ ದಾಳಿ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ನೌಕರರೇ ಅದರಲ್ಲೂ ವಿಶೇಷವಾಗಿ ಪೊಲೀಸ್ ಇಲಾಖೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಹಾಗೂ ಕಾರಾಗೃಹದ ಸಿಬ್ಬಂದಿಗಳು ಅಂತಾರಾಷ್ಟ್ರೀಯ ಭಯೋತ್ಪಾದಕರ ಜತೆ ಕೈ ಜೋಡಿಸಿ ಸದ್ದಿಲ್ಲದೇ ಉಗ್ರ ಚಟುವಟಿಕೆಗೆ ಪೋಷಣೆ ನೀಡಿದ್ದು ಆತಂಕಕಾರಿಯಷ್ಟೇ ಅಲ್ಲ, ಸರ್ಕಾರದ ‘ ಟೆರರ್ ಸಾಫ್ಟ್ ಕಾರ್ನರ್’ ಧೋರಣೆಯ ಪ್ರತಿಬಿಂಬ ಎಂದು ಆರೋಪಿಸಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಲಷ್ಕರ್ ಉಗ್ರ ಹಾಗೂ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಪಾಷಾ ಎಂಬ ಭಯೋತ್ಪಾದಕನಿಗೆ ಗೃಹ ಇಲಾಖೆಯ ಸಿಬ್ಬಂದಿಯೇ ಸಹಕಾರ ಕೊಡುತ್ತಿದ್ದರೂ ರಾಜ್ಯದ ಭಯೋತ್ಪಾದಕ ನಿಗ್ರಹ ದಳ ಕಡಲೆಪುರಿ ತಿನ್ನುತ್ತಿತ್ತೇ ?
ಸಿಎಂ ಹಾಗೂ ಗೃಹ ಸಚಿವರ ಕಣ್ಣಂಚಿನಲ್ಲೇ ಇಂಥ ವಿದ್ಯಮಾನ ನಡೆದಿದ್ದರೂ ರಾಜ್ಯ ಪೊಲೀಸರು ಕೈಕಟ್ಟಿ ಕುಳಿತಿದ್ದು ನಾಚಿಕೆಗೇಡಿನ ಸಂಗತಿ. ಮುಖ್ಯಮಂತ್ರಿ ಖುರ್ಚಿಗಾಗಿ ನಡೆಯುತ್ತಿರುವ ಸಂಗ್ರಾಮದಲ್ಲಿ ರಾಜ್ಯದ ಭವಿಷ್ಯವನ್ನು ಸ್ಫೋಟಗೊಳಿಸಬೇಡಿ. ಕಿಂಚಿತ್ತಾದರೂ ಜವಾಬ್ದಾರಿ ತೋರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಯೋತ್ಪಾದಕ ಸಂಘಟನೆಗಳ ಜತೆಗಿನ ನಂಟು, ಹಿಂದು ಕಾರ್ಯಕರ್ತರ ಹತ್ಯೆ ಸೇರಿದಂತೆ ಜಿಹಾದಿಗಳ ಪ್ರತ್ಯಕ್ಷ , ಪರೋಕ್ಷ ಕೈವಾಡವಿರುವ ಪ್ರಕರಣಗಳನ್ನು ಬೇಧಿಸುವುದಕ್ಕೆ ರಾಜ್ಯ ಪೊಲೀಸರಿಗೆ ಏಕೆ ಸಾಧ್ಯವಾಗುತ್ತಿಲ್ಲ ? ಪ್ರತಿ ಬಾರಿಯೂ ಎನ್ ಐಎ ಅಧಿಕಾರಿಗಳು ಈ ಷಡ್ಯಂತ್ರ ಬಯಲಿಗೆಳೆಯುತ್ತಿದ್ದಾರೆ ಎಂದರೆ ಸರ್ಕಾರ ರಾಜ್ಯ ಪೊಲೀಸರ ಕೈ ಕಟ್ಟಿ ಹಾಕಿದೆಯೇ ? ರಾಜ್ಯ ಭಯೋತ್ಪಾದನಾ ನಿಗ್ರಹ ದಳವನ್ನು ಸರ್ಕಾರ ಯಾವ ಕೆಲಸಕ್ಕೆ ಬಳಸಿಕೊಳ್ಳುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಬುಡಮೇಲು ಕೃತ್ಯದಲ್ಲಿ ಭಾಗಿಯಾದ ನಕ್ಸಲರಿಗೆ ಸಿಎಂ ಸಿದ್ದರಾಮಯ್ಯನವರ ಗೃಹ ಕಚೇರಿಯಲ್ಲೇ ಶರಣಾಗತಿ ಪ್ಯಾಕೇಜ್ ನೀಡಿ ನಕ್ಸಲ್ ನಿಗ್ರಹ ಪಡೆಯ ಬಲವನ್ನು ಕಡಿಮೆ ಮಾಡಿದಂತೆ ಭಯೋತ್ಪಾದಕ ನಿಗ್ರಹ ಹಾಗೂ ಆಂತರಿಕ ಭದ್ರತಾ ದಳವನ್ನೂ (ಐಎಸ್ ಡಿ) ಸಿದ್ದರಾಮಯ್ಯನವರು ನಿಷ್ಕ್ರಿಯಗೊಳಿಸಿದ್ದಾರೆಯೇ ? ತಮಗೆ ಮತ ನೀಡಿದ “ಬಾಂಧವರು” ಕುಪಿತಗೊಳ್ಳುತ್ತಾರೆಂಬ ಕಾರಣಕ್ಕೆ ” ಬಾಂಬ್ ” ಸ್ಫೋಟಿಸುವ ಆರೋಪಿಗಳಿಗೆ ಕಾರಾಗೃಹದಲ್ಲೂ ಸೌಲಭ್ಯ ಒದಗಿಸಲಾಗುತ್ತಿದೆಯೇ ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದು ಕಾರ್ಯಕರ್ತರನ್ನು ಮಟ್ಟ ಹಾಕುವುದಕ್ಕಾಗಿ “ದ್ವೇಷಭಾಷಣ” ಎಂಬಿತ್ಯಾದಿ ಬಾಬರ್ ಕಾಯ್ದೆ ಜಾರಿಗೆ ಹವಣಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಗೃಹ ಇಲಾಖೆಯ ಕಣ್ಣೆದುರೇ ನಡೆಯುವ ಉಗ್ರಕೃತ್ಯ ಕಾಣುವುದಿಲ್ಲವೇ ? ಓಲೈಕೆಗಾಗಿ ರಾಜ್ಯದ ಕಾನೂನು ಸುವ್ಯವಸ್ಥೆಗೆ ಟೈಮ್ ಬಾಂಬ್ ಹಾಕುವ ಪ್ರಯತ್ನಗಳನ್ನು ಮೂಕಪ್ರೇಕ್ಷಕರಂತೆ ನೋಡಬೇಡಿ ಎಂದು ಶಾಸಕ ವಿ ಸುನಿಲ್ ಕುಮಾರ್ ಟೀಕಿಸಿದ್ದಾರೆ.