
ಮೂಡುಬಿದಿರೆ, ಜುಲೈ 31: ಮೂಡುಬಿದಿರೆ ಎಕ್ಸಲೆಂಟ್ ಸಿಬಿಎಸ್ಇ ಶಾಲೆಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಸಮಾರಂಭ ಶಾಲೆಯ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆಯಿತು.
“ಶಾಲಾ ಸಂಸತ್ತು ನಾಳಿನ ರಾಷ್ಟ್ರ ನಾಯಕರನ್ನು ರೂಪಿಸುವ ನಾಯಕತ್ವದ ತರಬೇತಿಯ ವೇದಿಕೆಯಾಗಿದೆ.ಇಂದು ವಿಶ್ವವೇ ಯುವ ಶಕ್ತಿ, ಯುವ ಚಿಂತನೆ ಮತ್ತು ಹೊಸ ಆಲೋಚನೆಗಳತ್ತ ನಿರೀಕ್ಷೆಯಿಂದ ನೋಡುತ್ತಿದೆ. ಯಾವುದೇ ಪ್ರತಿಫಲ ಅಥವಾ ಪ್ರಶಂಸೆಯ ನಿರೀಕ್ಷೆಯಿಲ್ಲದೆ ನಿಷ್ಠೆಯಿಂದ ಸೇವೆ ಸಲ್ಲಿಸಿ; ಜಗತ್ತು ಗುರುತಿಸದಿದ್ದರೂ ನಿಮ್ಮ ಆತ್ಮಸಾಕ್ಷಿ ನೀಡುವ ತೃಪ್ತಿಯೇ ಅತ್ಯುನ್ನತ ಪ್ರಶಸ್ತಿ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಬಂಟ್ವಾಳದ ಖ್ಯಾತ ವಕೀಲ ಅಶ್ವನಿ ಕುಮಾರ್ ರೈ ಎಂ . ರವರು ಅಭಿಪ್ರಾಯಪಟ್ಟರು.
“ನಾಯಕತ್ವವು ಅಧಿಕಾರವಲ್ಲ; ಅದು ಇತರರಿಗೆ ಸ್ಫೂರ್ತಿ ನೀಡುವ ಹೊಣೆಗಾರಿಕೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಶಾಲಾ ಸಂಸತ್ತಿನ ಮೂಲಕ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಿ. ನಾಳೆಯ ರಾಷ್ಟ್ರದ ನಾಯಕತ್ವವು ಇಂದಿನ ತರಗತಿಯಿಂದಲೇ ರೂಪುಗೊಳ್ಳುತ್ತದೆ. ಸೇವೆ, ಶಿಸ್ತು ಮತ್ತು ಸಮರ್ಪಣೆಯ ಮನೋಭಾವದಿಂದ ಮುನ್ನಡೆಯಿರಿ ಎಂದು ಶಾಲಾ ಸಂಸತ್ತಿಗೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ರವರು ಶುಭ ಕೋರಿದರು.
‘ವಿದ್ಯಾರ್ಥಿಗಳೇ ದೇಶದ ಭವಿಷ್ಯವನ್ನು ರೂಪಿಸುವ ನಾಯಕರು. ಇವರು ಉತ್ತಮ ನಾಯಕತ್ವ, ಶಿಸ್ತು ಮತ್ತು ಪ್ರಾಮಾಣಿಕತೆಯೊಂದಿಗೆ ದೇಶವನ್ನು ಸರಿದಾರಿಯಲ್ಲಿ ಮುನ್ನಡೆಸುವ ಸಮರ್ಥ ನಾಗರಿಕರಾಗಲಿ ಎಂದು ನೂತನ ವಿದ್ಯಾರ್ಥಿ ನಾಯಕರಿಗೆ ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ. ಸಂಪತ್ ಕುಮಾರ್ ರವರು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾದ ಅಶ್ವನಿ ಕುಮಾರ್ ರೈ ಎಂ ಹಾಗೂ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಅವರು ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಬ್ಯಾಡ್ಜ್ಗಳನ್ನು ನೀಡಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಹೆರಿಟೇಜ್ ಕ್ಲಬ್, ಸಾಂಸ್ಕೃತಿಕ ಕ್ಲಬ್, ಇಕೋ ಕ್ಲಬ್, ಸಾಹಿತ್ಯ ಕ್ಲಬ್, ಕ್ರೀಡಾ ಕ್ಲಬ್, ಗಣಿತ ಕ್ಲಬ್ ಹಾಗೂ ವಿಜ್ಞಾನ ಕ್ಲಬ್ಗಳ ಉದ್ಘಾಟನೆಯು ನಡೆಯಿತು. ಶಾಲೆಯ ವಿವಿಧ ಹೌಸ್ಗಳಿಗೆ ಹೌಸ್ ಧ್ವಜಗಳನ್ನು ಹಸ್ತಾಂತರಿಸಲಾಯಿತು. ವಿದ್ಯಾರ್ಥಿಗಳಲ್ಲಿ ನಾಯಕತ್ವ, ಶಿಸ್ತು, ತಂಡದ ಸಹಕಾರ, ಜವಾಬ್ದಾರಿಯ ಮನೋಭಾವ ಹಾಗೂ ಆರೋಗ್ಯಕರ ಸ್ಪರ್ಧಾತ್ಮಕತೆಯನ್ನು ಬೆಳೆಸುವ ಉದ್ದೇಶದಿಂದ ಹೊಸ ಶೈಕ್ಷಣಿಕ ವರ್ಷದ ಕ್ಲಬ್ ಹಾಗೂ ಹೌಸ್ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ನೀಡಲಾಯಿತು.
ಶಾಲೆ ಯ ಪ್ರಾಂಶುಪಾಲರು ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಬಳಿಕ ವಿದ್ಯಾರ್ಥಿಗಳು ಪ್ರಮಾಣ ವಚನ ಸ್ವೀಕರಿಸಿ, ತಮಗೆ ವಹಿಸಲಾದ ಜವಾಬ್ದಾರಿಗಳು, ಕರ್ತವ್ಯಗಳು ಹಾಗೂ ಕಾರ್ಯಯೋಜನೆಗಳನ್ನು ಸಭೆಯ ಮುಂದೆ ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ಶ್ರೀಪ್ರಸಾದ್, ಸಿಬಿಎಸ್ಇ ಸಂಯೋಜಕಿವಿಮಲ, ಶಿಕ್ಷಕಿ ಸಹನಾ, ಶಾಲಾ ನಾಯಕ ನವನೀತ್, ಶಾಲಾ ನಾಯಕಿ ಪೂರ್ವಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಲಾ ನಾಯಕ ನವನೀತ್ ಸ್ವಾಗತಿಸಿ, ಶಾಲಾ ನಾಯಕಿ ಪೂರ್ವಿ ವಂದಿಸಿ, ಶಿಕ್ಷಕಿ ಸ್ವಾತಿ ನಿರೂಪಿಸಿದರು.























































