
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಐಟಿ ಇಲಾಖೆ ಅಧಿಕಾರಿಗಳ ಪರಿಶೀಲನೆ ನಡೆಯುತ್ತಿದ್ದ ವೇಳೆ ಉದ್ಯಮಿ ಸಿ.ಜೆ. ರಾಯ್ ಅವರು ಐದು ನಿಮಿಷಗಳ ಸಮಯ ಕೇಳಿಕೊಂಡು ಒಳಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿ, ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶವನ್ನು ಜನರಿಗೆ ತಿಳಿಸಲಿದೆ ಎಂದು ಹೇಳಿದ್ದಾರೆ.
ಸಿ.ಜೆ. ರಾಯ್ ಒಬ್ಬ ಉತ್ತಮ ಉದ್ಯಮಿ. ಈ ರೀತಿಯ ಘಟನೆ ನಡೆಯಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದ ಅವರು ಐಟಿ ಇಲಾಖೆಯ ತಂಡ ಕೇರಳದಿಂದ ಆಗಮಿಸಿದ್ದ ಮಾಹಿತಿ ಇದೆ. ಈ ಪ್ರಕರಣದ ಬಗ್ಗೆ ದೆಹಲಿಯಿಂದಲೂ ವರದಿ ಕೇಳಲಾಗಿದೆ. ಈ ವಿಷಯದಲ್ಲಿ ಸಮಗ್ರ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ ಎಂದು ಡಿಸಿಎಂ ಸ್ಪಷ್ಟಪಡಿಸಿದರು.
ಐಟಿ ವಿಚಾರವಾಗಿ ಮಾತನಾಡುವುದರಿಂದ ರಾಜಕೀಯ ಅರ್ಥ ಪಡೆಯುವ ಸಾಧ್ಯತೆ ಇದೆ ಎಂದು ಹೇಳಿದ ಅವರು, ಈ ರೀತಿಯ ಕಿರುಕುಳವನ್ನು ತಾವು ಖಂಡಿಸುತ್ತೇನೆ, ಇದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.



















