
ಉಡುಪಿ: ಉಡುಪಿಯ ಶ್ರೀಕೃಷ್ಣ ಮಠವು ಮತ್ತೊಂದು ಐತಿಹಾಸಿಕ ಹಾಗೂ ಭಕ್ತಿಪೂರ್ವಕ ಕಾರ್ಯಕ್ರಮಕ್ಕೆ ಸಿದ್ಧವಾಗಿದ್ದು ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ‘ವಿಶ್ವಗೀತಾ ಪರ್ಯಾಯ’ದ ಸಮಾರೋಪ ನಡೆಯಲಿದೆ. ಇದರ ಅಂಗವಾಗಿ ದೆಹಲಿಯ ಶ್ರೀಕೃಷ್ಣ ಭಕ್ತರೊಬ್ಬರು ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಿರುವ ಅಪ್ಪಟ ಚಿನ್ನದ ಹಾಳೆಗಳ ‘ಭಗವದ್ಗೀತೆ’ಯನ್ನು ಜನವರಿ 8ರಂದು ಉಡುಪಿ ಕೃಷ್ಣನಿಗೆ ಅರ್ಪಿಸಲಿದ್ದಾರೆ.
700 ಶ್ಲೋಕಗಳ ಸ್ವರ್ಣ ಸಂಪುಟ
ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿನ್ನದ ಭಗವದ್ಗೀತೆಯನ್ನು ಅತ್ಯಂತ ಕಲಾತ್ಮಕವಾಗಿ ಸಿದ್ಧಪಡಿಸಲಾಗಿದ್ದು ಇದರಲ್ಲಿ ಭಗವದ್ಗೀತೆಯ ಎಲ್ಲಾ 18 ಅಧ್ಯಾಯಗಳ 700 ಶ್ಲೋಕಗಳನ್ನು ಚಿನ್ನದ ಹಾಳೆಗಳ ಮೇಲೆ ಅಂದವಾಗಿ ಮುದ್ರಿಸಲಾಗಿದೆ. ಪ್ರತಿಯೊಂದು ಅಕ್ಷರವೂ ಭಕ್ತಿಯ ಸಂಕೇತವಾಗಿ ಕಂಗೊಳಿಸುತ್ತಿದ್ದು, ಇದು ಮಠದ ಇತಿಹಾಸದಲ್ಲಿಯೇ ಅಪರೂಪದ ಕಾಣಿಕೆಯಾಗಿ ಅಚ್ಚಾಗಿ ಉಳಿಯಲಿದೆ.
ಜನವರಿ 8ರಂದು ನಡೆಯಲಿರುವ ಈ ಸಮಾರಂಭದಲ್ಲಿ ಚಿನ್ನದ ಭಗವದ್ಗೀತೆಯನ್ನು ಚಿನ್ನದ ರಥದಲ್ಲಿ ಇರಿಸಿ ಭವ್ಯವಾಗಿ ಮೆರವಣಿಗೆ ಮಾಡಲಾಗುವುದು. ನಂತರ ಶಾಸ್ತ್ರೋಕ್ತವಾಗಿ ಕೃಷ್ಣನಿಗೆ ಅರ್ಪಿಸಲಾಗುವುದು. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸೇರಿದಂತೆ ದೇಶದ ವಿವಿಧ ಭಾಗಗಳ ಗಣ್ಯರು ಹಾಗೂ ಸಾವಿರಾರು ಭಕ್ತರು ಆಗಮಿಸಲಿದ್ದಾರೆ.



















