ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ.. 7 ಪುಟಗಳ ಡೆತ್ ನೋಟ್

ಹೈದರಾಬಾದ್: ಹೈದರಾಬಾದ್‌ನ ಗಜುಲರಾಮರಂನ ಬಾಲಾಜಿ ಲೇಔಟ್‌ನಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಇಬ್ಬರು ಗಂಡು ಮಕ್ಕಳನ್ನು ಕೊಂದು ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.
ತೆಂಗಿನಕಾಯಿ ತುರಿಯುವ ಮಣೆಯಿಂದ ತನ್ನ ಮಕ್ಕಳಾದ ಆಶಿಶ್ ರೆಡ್ಡಿ(8), ಅರ್ಷಿತ್ ರೆಡ್ಡಿ(6) ಎಂಬ ಇಬ್ಬರಿಗೂ ತೇಜಸ್ವಿನಿ(33) ಹೊಡೆದು ಕೊಲೆ ಮಾಡಿ, ಬಳಿಕ ತಾನೂ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮನೆಯಲ್ಲಿ ಕಿರುಚಾಟದ ಶಬ್ದ ಕೇಳಿದ್ದರಿಂದ ಬಂದು ನೋಡಿದಾಗ ಮಕ್ಕಳಿಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದು ಆಶಿಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಅರ್ಷಿತ್ ರೆಡ್ಡಿ ಗಂಭೀರ ಸ್ಥಿತಿಯಲ್ಲಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಅಷ್ಟರಲ್ಲಾಗಲೇ ಆತ ಕೊನೆಯುಸಿರೆಳೆದಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜೀಡಿಮೆಲ್ಲಾ ಪೊಲೀಸರು ಭೇಟಿ ನೀಡಿ, ಪರಿಸೀಲನೆ ನಡೆಸಿದ್ದು ಈ ವೇಳೆ 7 ಪುಟಗಳ ಡೆತ್‌ನೋಟ್ ಪತ್ತೆಯಾಗಿದೆ. ತೇಜಸ್ವಿನಿ, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬಗ್ಗೆ ಉಲ್ಲೇಖಿಸಿದ್ದು ಪುತ್ರರಿಬ್ಬರ ಉಸಿರಾಟದ ತೊಂದರೆ ಹಾಗೂ ಪತಿಯ ಬೆಂಬಲದ ಕೊರತೆಯಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.



