
ನವದೆಹಲಿ: ಸೋಮವಾರ ಇದೇ ಮೊದಲ ಬಾರಿಗೆ ಭಾರತದ ಮಾರುಕಟ್ಟೆಗೆ ಸೂಜಿ ಚುಚ್ಚಿಸಿಕೊಳ್ಳುವ ಜಂಜಾಟ, ಭಯವಿಲ್ಲದೆ ಬಾಯಿಯ ಉಸಿರಾಟದ ಮೂಲಕವೇ ತೆಗೆದುಕೊಳ್ಳಬಹುದಾದ ಇನ್ಸುಲಿನ್ ಮಾರುಕಟ್ಟೆಗೆ ಕಾಲಿಟ್ಟಿದೆ. ‘ಅಫ್ರೆಜ್ಜಾ’ ಹೆಸರಿನ ಇನ್ಸುಲಿನ್ ಸಿಪ್ಲಾ ಸಂಸ್ಥೆಯ ಮೂಲಕ ವಾಣಿಜ್ಯ ಮಾರಾಟಕ್ಕೆ ಲಭ್ಯವಿದ್ದು ಇದನ್ನು ಉಸಿರಾಟದ ಮೂಲಕ ದೇಹದೊಳಗೆ ಎಳೆದುಕೊಳ್ಳಬಹುದಾಗಿದೆ.
ಟೈಪ್ 1 ಮತ್ತು ಟೈಪ್ 2 ಮಧುಮೇಹ ಹೊಂದಿರುವ ವಯಸ್ಕರಿಗೆ ಇದು ಪರಿಣಾಮಕಾರಿ ಇನ್ಸುಲಿನ್ ಆಗಿದ್ದು ಭಾರತದಲ್ಲಿ ಮಧುಮೇಹದಿಂದ ಬಳಲುತ್ತಿರುವ ಸುಮಾರು 10.1 ಕೋಟಿ ಜನರಲ್ಲಿ ಸುಮಾರು ಶೇಕಡ 10 ರಿಂದ 15 ರಷ್ಟು ಜನರಿಗೆ ಇನ್ಸುಲಿನ್ ಚಿಕಿತ್ಸೆಯ ಅಗತ್ಯವಿದೆ.
ಅಮೆರಿಕ ಮೂಲದ ಮ್ಯಾನ್ ಕೈಂಡ್ ಕಾರ್ಪೊರೇಷನ್ ತಯಾರಿಸಿರುವ ಈ ಇನ್ಸುಲಿನ್ ಗೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಭಾರತದ ಕೇಂದ್ರ ಔಷಧ ಪ್ರಮಾಣದ ನಿಯಂತ್ರಣ ಸಂಸ್ಥೆಯು ಅನುಮೋದನೆ ನೀಡಿತ್ತು. ‘ಟೆಕ್ನೋಸ್ಪಿಯರ್ ಇನ್ಸುಲಿನ್’ ಎಂಬ ತಂತ್ರಜ್ಞಾನವು ಅಪ್ರೆಜ್ಜಾದಲ್ಲಿ ಬಳಕೆಯಾಗಿದ್ದು ಪುಡಿ ರೂಪದ ಇನ್ಸುಲಿನ್ ಶ್ವಾಸಕೋಶದ ಮೂಲಕ ಅತಿ ವೇಗವಾಗಿ ರಕ್ತ ಪ್ರವಾಹಕ್ಕೆ ಸೇರುವಂತೆ ಮಾಡುತ್ತದೆ. ಇದು ಸಾಂಪ್ರದಾಯಿಕ ಚುಚ್ಚುಮದ್ದು ವಿಧಾನಕ್ಕಿಂತಲೂ ವೇಗವಾಗಿ ಕೆಲಸ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.





