
ಕೊಪ್ಪಳ: ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಕಾಣುತ್ತಿದ್ದು ಆದರೆ ಹೆಚ್ಚಿನ ಜನರು ತಮಗೆ ಸಕ್ಕರೆ ಕಾಯಿಲೆ, ರಕ್ತದೊತ್ತಡ ಇದ್ದರೂ ಚಿಕಿತ್ಸೆ ಪಡೆದುಕೊಳ್ಳುತ್ತಿಲ್ಲ. ಇದಕ್ಕಾಗಿ ಆರೋಗ್ಯ ಇಲಾಖೆ, ರಾಜ್ಯದ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಇಂದಿನಿಂದ ರಾಜ್ಯದಲ್ಲಿ ಗೃಹ ಆರೋಗ್ಯ ಯೋಜನೆಯನ್ನು ಜಾರಿಗೊಳಿಸುತ್ತಿದೆ.
ಈ ಗೃಹ ಆರೋಗ್ಯ ಯೋಜನೆಯು ಹಳ್ಳಿ ಪ್ರದೇಶಗಳ ಜನರ ಆರೋಗ್ಯದ ಮಟ್ಟ ಸುಧಾರಿಸುವ ಮತ್ತು ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದ್ದು ಈ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಬಿಪಿ, ಶುಗರ್ ಇದ್ದವರಿಗೆ ಇನ್ನು ಮುಂದೆ ಮನೆಗೆ ಔಷಧಗಳನ್ನು ಉಚಿತವಾಗಿ ತಲುಪಿಸಲಾಗುತ್ತದೆ.
ಆಧುನಿಕ ಜೀವನ ಶೈಲಿ, ಅತಿಯಾದ ಒತ್ತಡದಲ್ಲಿ ಕೆಲಸ ಮಾಡೋದು, ಆರೋಗ್ಯದ ಬಗ್ಗೆ ಹೆಚ್ಚಿನ ಜನರು ಕಾಳಜಿ ವಹಿಸದೇ ಇರೋದು, ನಿಯಮಿತವಾಗಿ ವ್ಯಾಯಾಮ, ಉತ್ತಮ ಆಹಾರ ಪದ್ದತಿಯನ್ನು ಅನುಸರಿಸದೇ ಇರೋದರಿಂದ ಹೆಚ್ಚಿನ ಜನರಿಗೆ ಬಿಪಿ, ಶುಗರ್ ಬರಲು ಕಾರಣವಾಗುತ್ತಿದೆ.
ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಮಾಹಿತಿ ನೀಡಿದ್ದು ಹೊಸ ಯೋಜನೆಗೆ ಇಂದು ಚಾಲನೆ ನೀಡಲಾಗುವುದು.
ಗೃಹ ಆರೋಗ್ಯ ಯೋಜನೆಯಡಿ, ಆರೋಗ್ಯ ಇಲಾಖೆಯ ಸಿಬ್ಬಂದಿ, ರಾಜ್ಯದ ಪ್ರತಿಯೊಬ್ಬರ ಮನೆಗೆ ಹೋಗಿ, ಅವರ ಆರೋಗ್ಯ ತಪಾಸಣೆ ನಡೆಸಲಿದೆ. ನಗರ, ಗ್ರಾಮೀಣ ಪ್ರದೇಶದಲ್ಲಿ ಮುಂದಿನ ಕೆಲ ದಿನಗಳ ಕಾಲ ಮನೆಮನೆಗೆ ಹೋಗಿ ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುವದು, ತಪಾಸಣೆ ಮಾಡುತ್ತಾರೆ. ಪ್ರಮುಖವಾಗಿ ಬಿಪಿ, ಶುಗರ್ ಇದೆಯಾ ಎಂಬುದನ್ನು ತಪಾಸಣೆ ನಡೆಸಿ, ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಯಾರಿಗೆಲ್ಲಾ ಬಿಪಿ, ಶುಗರ್ ಇದೆಯೋ ಅವರ ಮಾಹಿತಿಯನ್ನು ಸಂಗ್ರಹಿಸುವ ಕೆಲಸ ಮಾಡುತ್ತಾರೆ. ಅವರಿಗೆ ಚಿಕಿತ್ಸೆಯ ಅವಶ್ಯಕತೆ ಇದ್ದರೆ ಅವರು ತಗೆದುಕೊಳ್ಳಬೇಕಾದ ಔಷಧಿಗಳನ್ನು ಮನೆ ಬಾಗಿಲಿಗೆ ಹೋಗಿ ತಲುಪಿಸಲಿದ್ದಾರೆ. ಇನ್ನು ಔಷಧಗಳನ್ನು ಉಚಿತವಾಗಿ ಪ್ರತಿ ತಿಂಗಳು ನಿರಂತರವಾಗಿ ಮನೆಗೆ ಕಳುಹಿಸುವ ವ್ಯವಸ್ಥೆಯನ್ನು ಯೋಜನೆಯಡಿ ಮಾಡಲಾಗಿದೆ. ಅನೇಕರು ಸರ್ಕಾರಿ ಆಸ್ಪತ್ರೆಗೆ ಬಂದು ತಗೆದುಕೊಂಡು ಹೋಗಬಹುದಾಗಿದೆ. ತಗೆದುಕೊಂಡು ಹೋಗಲಿಕ್ಕಾಗದೇ ಇದ್ದವರಿಗೆ, ಮನೆಮನೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಮೂಲಕ ತಲುಪಿಸುವ ಕೆಲಸವನ್ನು ಯೋಜನೆ ಮೂಲಕ ಮಾಡಲಾಗುತ್ತದೆ.
ಇನ್ನು ಆರೋಗ್ಯ ತಪಾಸಣೆಯಲ್ಲಿ ಕ್ಯಾನ್ಸರ್, ಮಾನಸಿಕ ಖಾಯಿಲೆ, ಸ್ತನ ಕ್ಯಾನ್ಸರ್ ಸೇರಿದಂತೆ ಇನ್ನಿತರ ಖಾಯಿಲೆಗಳು ಇದ್ದರೂ ಕೂಡಾ, ಅವರಿಗೆ ಸರ್ಕಾರದ ಅನೇಕ ಯೋಜನೆಗಳಲ್ಲಿ ಅವರಿಗೆ ಚಿಕಿತ್ಸೆ ನೀಡುವ ಕೆಲಸವನ್ನು ಕೂಡಾ ಮಾಡುವುದಾಗಿ ಆರೋಗ್ಯ ಸಚಿವರು ತಿಳಿಸಿದ್ದಾರೆ.





















































