
ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ಬರೋಬ್ಬರಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳವು ಇಂದಿನಿಂದ ಆರಂಭವಾಗಿದ್ದು ಇದರಲ್ಲಿ ಅಧ್ಯಾತ್ಮ ವಿಸ್ಮಯವೇ ಜರುಗಲಿದೆ. ಈ ಧಾರ್ಮಿಕ ಮೇಳದಲ್ಲಿ ಕೋಟಿಗಟ್ಟಲೇ ಸಾಧು-ಸಂತರು ನಾಗಸಾಧುಗಳು, ಅಘೋರಿಗಳು, ಭಕ್ತರು ಆಗಮಿಸಲಿದ್ದು ಈ ಸಂಭ್ರಮಾಚರಣೆ ನಡುವೆ ಸಮೀಪದಲ್ಲೇ ಇರುವ ಅಯೋಧ್ಯೆಯಲ್ಲಿ ಮೊದಲ ವಾರ್ಷಿಕೋತ್ಸವ ಸಂಭ್ರಮವೂ ನಡೆಯುತ್ತಿದೆ.
ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳ ಈ ಬಾರಿ ಅತೀ ವಿಶೇಷವಾಗಿದ್ದು ಏಕೆಂದರೆ ಪ್ರಯಾಗ್ ರಾಜ್ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಭಾರತ ಅಷ್ಟೇ ಅಲ್ಲದೇ ವಿದೇಶಗಳಿಂದಲೂ ಭಕ್ತರು ಆಗಮಿಸಿ ಗಂಗಾ, ಯಮುನಾ, ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಈಗಾಗಲೇ ಕಳೆದ 2 ದಿನಗಳಲ್ಲಿ 85 ಲಕ್ಷ ಮಂದಿ ಸ್ನಾನ ಮಾಡಿದ್ದಾರೆ.
ಇಂದಿನಿಂದ ಮಹಾ ಕುಂಭಮೇಳ ಆರಂಭವಾಗಿದ್ದು ಫೆ.26ರ ಶಿವರಾತ್ರಿ ದಿನದಂದು ಈ ಕುಂಭಮೇಳ ಸಂಪನ್ನಗೊಳ್ಳಲಿದೆ. ಜ.14ರಂದು ಮಕರ ಸಂಕ್ರಾಂತಿ, ವಸಂತ, ಪಂಚಮಿ, ಹೀಗೆ 5 ಬಾರಿ ಪುಣ್ಯಸ್ನಾನ ಪ್ರಯಾಗ್ರಾಜ್ನಲ್ಲಿರುವ ತ್ರಿವೇಣಿ ಸಂಗಮದಲ್ಲಿ ನಡೆಯಲಿದೆ.
ಒಂದೇ ಒಂದು ಪ್ಲಾಸ್ಟಿಕ್ ಬಳಸದೇ ಸಂಪೂರ್ಣ ಪರಿಸರ ಸ್ನೇಹಿಯಾಗಿ ಆಚರಿಸಲು ಉದ್ದೇಶಿಸಿರುವುದು ಈ ಬಾರಿಯ ಮಹಾಕುಂಭಮೇಳದ ವಿಶೇಷತೆಯಾಗಿದೆ. ಸ್ವಚ್ಛತೆ ಮತ್ತು ಶುದ್ಧತೆ ಕಾಪಾಡುವುದಕ್ಕಾಗಿ ಬರೋಬ್ಬರಿ 1,500 ಪೌರ ಕಾರ್ಮಿಕರು ಹಗಲಿರುಳು ದುಡಿಯುತ್ತಿದ್ದು ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ಸರಾಗವಾಗಿ ಸಾಗಲು 50ಕ್ಕೂ ಹೆಚ್ಚು ತಾತ್ಕಾಲಿಕ ಬ್ರಿಡ್ಜ್ಗಳನ್ನ ನಿರ್ಮಿಸಲಾಗಿದೆ. ಅಲ್ಲದೇ 1.5 ಲಕ್ಷ ಶೌಚಾಲಯ, ಸ್ನಾನಗೃಹಗಳನ್ನು ನಿರ್ಮಿಸಲಾಗಿದ್ದು ಏಕಕಾಲಕ್ಕೆ ಸಾವಿರಾರು ಜನರು ತಂಗಲು ಅನುಕೂಲವಾಗುವಂತೆ ಅಲ್ಲಲ್ಲಿ ಟೆಂಟ್ಗಳನ್ನ ನಿರ್ಮಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಹರಿದ್ವಾರ ಮೂಲದ ಸಂಘಟನೆಯೊಂದು ʻಒಂದು ದೇಶ ಒಂದು ಚುನಾವಣೆ’ ಸೇರಿ ಒಟ್ಟು 7 ವಿಷಯಗಳ ಬಗ್ಗೆ ಉಪನ್ಯಾಸ ಆಯೋಜಿಸಿದ್ದು ಜ. 12ರಂದು ಮೊದಲ ದಿನ ಸ್ವಾಮಿ ವಿವೇಕಾನಂದರ ಬಗ್ಗೆ ಉಪನ್ಯಾಸ ನೀಡಲಾಗಿದೆ. ʻಒಂದು ದೇಶ ಒಂದು ಚುನಾವಣೆ’ ವಿಷಯದ ಬಗ್ಗೆ ಜ.18ರಂದು ಉಪನ್ಯಾಸ ನಿಗದಿಯಾಗಿದೆ. ಮಹಾಕುಂಭಮೇಳ ನಡೆಯುವ ಸ್ಥಳದಲ್ಲಿ ಒಟ್ಟು ಏಳು ಉಪನ್ಯಾಸಗಳ ಸರಣಿ ನಡೆಯಲಿದ್ದು ಜನವರಿ 18ರಂದು ಒಂದು ‘ದೇಶ ಒಂದು ಚುನಾವಣೆ- ವಿಕಸಿತ ಭಾರತದ ವೇಳೆಯಲ್ಲಿ ಆರ್ಥಿಕ, ರಾಜಕೀಯ ಸುಧಾರಣೆ’ ಎನ್ನುವ ವಿಷಯದ ಬಗ್ಗೆ ಭಾಷಣ ನಡೆಯಲಿದೆ. ಈ ವಿಷಯದ ಬಗ್ಗೆ ಮಾತನಾಡಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಆಹ್ವಾನ ನೀಡಲಾಗಿದ್ದು, ಅವರು ಕುಂಭಮೇಳ ನಡೆಯುವ ಸ್ಥಳಕ್ಕೆ ಬಂದು ಭಾಷಣ ಮಾಡಲಿದ್ದಾರೆ. ಇದರೊಂದಿಗೆ ಜಾಗತಿಕ ಭಯೋತ್ಪಾದನೆ, ಭಾರತದ ಸಮಗ್ರತೆ ಮತ್ತು ಸವಾಲುಗಳು, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ, ಸಾಮಾಜಿಕ ಮಾಧ್ಯಮದಲ್ಲಿ ಗೌಪ್ಯತೆ ಮತ್ತು ಸುರಕ್ಷತೆ ಮುಂತಾದ ವಿಷಯಗಳ ಬಗ್ಗೆ ಉಪನ್ಯಾಸ ಇರಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.



















