
ನವದೆಹಲಿ: ಶೇ.20ರಷ್ಟು ಎಥನಾಲ್ ಮಿಶ್ರಿತ ಇ20 ಪೆಟ್ರೋಲ್ ಬಳಕೆಯಿಂದ ವಾಹನಗಳ ಮೈಲೇಜ್ ಶೇ.3ರಿಂದ 5ರಷ್ಟು ಕುಸಿಯಬಹುದು ಎಂಬ ವಿಚಾರದ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ವಾಹನ ಸವಾರರ ನಡುವೆ ಚರ್ಚೆ ತೀವ್ರಗೊಂಡಿದೆ.
ಎಥನಾಲ್ ಮಿಶ್ರಿತ ಪೆಟ್ರೋಲ್ ಕುರಿತು ಪ್ರತಿಕ್ರಿಯಿಸಿದ ಗಡ್ಕರಿ, ಕಾರು ಮಾಲೀಕರು ತಮ್ಮ ವಾಹನದ ನಿಖರ ಇಂಧನ ದಕ್ಷತೆಯನ್ನು ಸ್ವತಃ ಲೆಕ್ಕ ಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದಕ್ಕಾಗಿ ಅಧಿಕೃತ ಡೀಲರ್‌ಗಳ ಪರೀಕ್ಷಾ ಉಪಕರಣಗಳನ್ನೇ ಅವಲಂಬಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಪತ್ರಕರ್ತೆಯೊಬ್ಬರು, ಇ20 ಪೆಟ್ರೋಲ್ ಬಳಕೆಯ ಬಳಿಕ ನಗರದಲ್ಲಿ ತಮ್ಮ ಕಾರಿನ ಮೈಲೇಜ್ 11 ಕಿ.ಮೀ.ನಿಂದ 7 ಕಿ.ಮೀ.ಗೆ ಇಳಿದಿದೆ ಎಂದು ತಿಳಿಸಿದರು. ಇದಕ್ಕೆ ಗಡ್ಕರಿ, ಈ ಲೆಕ್ಕವನ್ನು ಹೇಗೆ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದು ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿರುವ ಮೈಲೇಜ್ ಡಿಸ್‌ಪ್ಲೇ ಆಧರಿಸಿ ಲೆಕ್ಕ ಹಾಕಿರುವುದಾಗಿ ಪತ್ರಕರ್ತೆ ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗಡ್ಕರಿ, ನಿಖರ ಮೈಲೇಜ್ ಅನ್ನು ಕಂಪನಿಯ ಅಧಿಕೃತ ಡೀಲರ್‌ಗಳ ಯಂತ್ರಗಳ ಮೂಲಕ ಮಾತ್ರ ಪರಿಶೀಲಿಸಬಹುದು ಎಂದು ಹೇಳಿದರು.
ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ, ಕೆಲವು ವಾಹನಗಳಲ್ಲಿ ಇ20 ಪೆಟ್ರೋಲ್ ಬಳಕೆಯಿಂದ ಇಂಧನ ದಕ್ಷತೆ ಶೇ.3ರಿಂದ 5ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಒಪ್ಪಿಕೊಂಡಿತ್ತು. ಆದರೆ, ಮೈಲೇಜ್ ಮಾತ್ರವೇ ವಾಹನದ ಕಾರ್ಯಕ್ಷಮತೆಯ ಏಕೈಕ ಮಾನದಂಡವಲ್ಲ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಬಿಡುಗಡೆ ಮಾಡಿದ ಪ್ರಶ್ನೋತ್ತರ ದಾಖಲೆಯಲ್ಲಿ, ಎಥನಾಲ್ ಮಿಶ್ರಣದ ಉದ್ದೇಶ ಕಚ್ಚಾ ತೈಲ ಆಮದು ಅವಲಂಬನೆ ಕಡಿಮೆ ಮಾಡುವುದು ಹಾಗೂ ಪರಿಸರ ಸ್ನೇಹಿ ಇಂಧನ ಬಳಕೆಯನ್ನು ಉತ್ತೇಜಿಸುವುದಾಗಿದೆ ಎಂದು ತಿಳಿಸಲಾಗಿದೆ.
ಏಪ್ರಿಲ್ 1ರಿಂದ ದೇಶಾದ್ಯಂತ ಇ20 ಪೆಟ್ರೋಲ್ ಕಡ್ಡಾಯವಾಗಿ ಮಾರಾಟವಾಗುತ್ತಿದೆ. ಆದರೆ, ಈ ನಿರ್ಧಾರಕ್ಕೆ ಹಲವು ವಾಹನ ಸವಾರರು ಹಾಗೂ ವಾಹನ ಉದ್ಯಮದ ಕೆಲವು ವಲಯಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಮೈಲೇಜ್ ಕುಸಿತ ಮತ್ತು ವಾಹನಗಳ ಕಾರ್ಯಕ್ಷಮತೆ ಕುರಿತು ಹಲವು ಪ್ರಶ್ನೆಗಳು ಕೇಳಿಬರುತ್ತಿವೆ.
ತಜ್ಞರ ಪ್ರಕಾರ, ಡ್ಯಾಶ್‌ಬೋರ್ಡ್‌ನಲ್ಲಿ ಕಾಣುವ ಮೈಲೇಜ್ ಕೇವಲ ಅಂದಾಜು ಮಾತ್ರ. ‘ಫುಲ್-ಟ್ಯಾಂಕ್’ ವಿಧಾನದಿಂದ ಲೆಕ್ಕ ಹಾಕಿದರೆ ಹೆಚ್ಚು ನಿಖರ ಫಲಿತಾಂಶ ದೊರೆಯುತ್ತದೆ. ಡೀಲರ್‌ಗಳ ಪರೀಕ್ಷಾ ಯಂತ್ರಗಳು ಇಸಿಯು, ಇಂಧನ ಇಂಜೆಕ್ಟರ್, ಆಕ್ಸಿಜನ್ ಸೆನ್ಸಾರ್ ಹಾಗೂ ಇತರ ವ್ಯವಸ್ಥೆಗಳ ಮಾಹಿತಿಯನ್ನು ಪರಿಶೀಲಿಸಿ ನಿಖರ ಇಂಧನ ದಕ್ಷತೆಯನ್ನು ಅಂದಾಜಿಸುತ್ತವೆ.
ಸಂಚಾರ ದಟ್ಟಣೆ, ರಸ್ತೆ ಪರಿಸ್ಥಿತಿ, ಎಸಿ ಬಳಕೆ, ಟೈರ್ ಒತ್ತಡ, ಚಾಲನಾ ಶೈಲಿ ಮತ್ತು ವಾಹನದ ತೂಕ ಸೇರಿದಂತೆ ಹಲವು ಅಂಶಗಳು ಕೂಡ ವಾಹನದ ಮೈಲೇಜ್ ಮೇಲೆ ಪರಿಣಾಮ ಬೀರುತ್ತವೆ.













































