
ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಚಿವ ಸಂಪುಟ ಸಭೆಯ ಬಳಿಕ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಹಣಕಾಸು ಇಲಾಖೆಯಿಂದ ಅನುಮತಿ ನೀಡಿದ ತಕ್ಷಣವೇ 2025ರ ಬಾಕಿ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ಎರಡು ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಕುರಿತು ಈಗಾಗಲೇ ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದು ಸದನದಲ್ಲಿ ಅವರು ಉತ್ತರ ಕೊಟ್ಟಿದ್ದಾರೆ. ರೇಷನ್ ಕಾರ್ಡ್ ಆಧರಿಸಿ ಸರ್ಕಾರ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಹಣ ಹಾಕುತ್ತಿದ್ದು ಇದೀಗ ಕೆಲವು ಪಡಿತರ ಚೀಟಿಗಳು ರದ್ದಾದ ಕಾರಣ ಹಣ ಕೂಡ ಜಮೆ ಆಗದಿರಬಹುದು. ಹೀಗಾಗಿ ಆಹಾರ ಇಲಾಖೆಯಿಂದ ಹೊಸ ಡೇಟಾ ಬಂದ ತಕ್ಷಣ ಆದಷ್ಟು ಶೀಘ್ರವೇ ಎಲ್ಲಾ ಸಮಸ್ಯೆಗಳು ಬಗೆಹರಿದು ಬಾಕಿ ಇರುವ ಹಣ ಜಮೆಯಾಗಲಿದೆ ಎಂದು ಮಾಹಿತಿ ನೀಡಿದರು.



















