ಕಾನೂನಿನ ಮೊರೆ ಹೋದ ತಂದೆಗೆ ಮನೆ ವಾಪಸ್ ಕೊಡಿಸಿದ ನ್ಯಾಯಾಲಯ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರ ಶಾಂತಿನಗರದಲ್ಲಿ ಸುಬ್ಬಲಕ್ಷ್ಮೀ ಎನ್ನುವ ಮಗಳು ಗಂಡನ ಮನೆ ಬಿಟ್ಟು ತವರು ಮನೆಯಲ್ಲೇ ನೆಲೆಸಿದ್ದು ಆದರೂ ಸುಬ್ಬಲಕ್ಷ್ಮೀ ತಂದೆ ವೆಂಕಟರೋಣಪ್ಪನವರ ಜೊತೆ ಗಲಾಟೆ ಮಾಡಿ ತಂದೆಯನ್ನೇ ಮನೆಯಿಂದ ಆಚೆ ಹಾಕಿದ್ದಾಳೆ. ಕೊನೆಗೆ ನ್ಯಾಯಾಲಯವು ವೆಂಕಟರೋಣಪ್ಪನವರ ನೆರವಿಗೆ ಬಂದಿದ್ದು, ಮಗಳನ್ನೇ ಮನೆಯಿಂದ ಆಚೆ ಹಾಕಿಸಿ ತಂದೆಗೆ ಮನೆ ವಾಪಸ್ ಕೊಡಿಸಿದೆ.
72 ವರ್ಷದ ಶಾಂತಿ ನಗರದ ನಿವಾಸಿ ವೆಂಕಟರೋಣಪ್ಪನವರಿಗೆ ಮೂರು ಜನ ಮಕ್ಕಳಿದ್ದು ಮಗಳು ಸುಬ್ಬಲಕ್ಷ್ಮೀ ಅಂಗನವಾಡಿ ಶಿಕ್ಷಕಿ. ತಂದೆಯ ಆಸ್ತಿಯಾಗಿರೋ ಶಾಂತಿ ನಗರದ ಮನೆಯಲ್ಲೇ ತಂದೆಯ ಜೊತೆಯಲ್ಲಿ ತನ್ನ ಗಂಡ ಮಕ್ಕಳ ಜೊತೆ ಜೀವನ ಸಾಗಿಸುತ್ತಿದ್ದಳು. ಆದರೆ ಮಗಳು ತಂದೆಯನ್ನೇ ಸರಿಯಾಗಿ ನೋಡಿಕೊಳ್ಳದೆ ಊಟ ಹಾಕುತ್ತಿರಲಿಲ್ಲ.
ತಂದೆ ಹಾಗೂ ಮಗಳು ಸದಾ ಜಗಳ ಮಾಡುತ್ತಿದ್ದು ಹೀಗಾಗಿ ಮಗಳು ಸುಬ್ಬಲಕ್ಷ್ಮೀ, ತಂದೆಯನ್ನೇ ಮನೆಯಿಂದ ಆಚೆ ಹಾಕಿದ್ದಳು. ಮಗಳ ವರ್ತನೆಯಿಂದ ಬೇಸತ್ತಿದ್ದ ವೆಂಕಟರೋಣಪ್ಪ, ಹಿರಿಯ ನಾಗರಿಕರ ಪೋಷಣೆ ಮತ್ತು ಶ್ರೇಯೊಭಿವೃದ್ದಿ ಹಾಗೂ ಸಂರಕ್ಷಣಾ ಕಾಯ್ದೆ 2007ರಡಿ, ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ ಎ.ಸಿ ನ್ಯಾಯಾಲಯವು, ಇರುವ ಮನೆಯನ್ನು ವೆಂಕಟರೋಣಪ್ಪಗೆ ಬಿಟ್ಟು ಕೊಡಬೇಕು. ಅಲ್ಲದೇ ಪ್ರತಿ ತಿಂಗಳ ಐದು ಸಾವಿರ ರೂಪಾಯಿ ಹಣ ನೀಡುವಂತೆ ಆದೇಶ ಮಾಡಿದ್ದು, ಆದೇಶವನ್ನು ಅನುಷ್ಠಾನ ಮಾಡಿಸುವಂತೆ ಚಿಕ್ಕಬಳ್ಳಾಪುರ ತಹಶಿಲ್ದಾರ್ ಹಾಗೂ ಪೊಲಿಸರಿಗೆ ಸೂಚನೆ ನೀಡಿದೆ. ಈ ಆದೇಶದ ಮೇರೆಗೆ ಚಿಕ್ಕಬಳ್ಳಾಪುರ ತಹಶಿಲ್ದಾರ್ ಅನಿಲ್, ಮುಲಾಜಿಲ್ಲದೆ ಸುಬ್ಬಲಕ್ಷ್ಮೀ ಆಕೆಯ ಮಕ್ಕಳು ಹಾಗೂ ಆಕೆಯ ಗಂಡನನ್ನು ಮನೆಯಿಂದ ಆಚೆ ಹಾಕಿ, ಹಿರಿಯ ನಾಗರಿಕ ವೆಂಕಟರೋಣಪ್ಪ ಮನೆ ವಾಪಸ್ ಕೊಡಿಸಿದ್ದಾರೆ.





















