
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪದವಿ ಕಾಲೇಜು ರಾಷ್ಟೀಯ ಸ್ವಯಂ ಸೇವಾ ಯೋಜನಾದ ಒಟ್ಟು 60 ವಿದ್ಯಾರ್ಥಿಗಳ ತಂಡದಿಂದ “ಆಶ್ರಮ ಭೇಟಿ” ವಿನೂತನ ಪರಿಕಲ್ಪನೆಯ ಕಾರ್ಯಕ್ರಮವು ಕಾರ್ಕಳ ಸಮೀಪದ ಬೈಲೂರಿನ ರಂಗನಪಲ್ಕೆಯಲ್ಲಿರುವ ಹೊಸಬೆಳಕು ಆಶ್ರಮದಲ್ಲಿ ನಡೆಯಿತು. ಈ ಸಂದರ್ಭ ಆಶ್ರಮದ ಸಂಚಾಲಕಿ ತನುಲಾ ತರುಣ್, ಅವರು ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳ ಸ್ವಯಂ ಸೇವಾ ತಂಡದ ಈ ದೂರದೃಷ್ಟಿತ್ವ ಮತ್ತು ಪರಿಸರ ಸಂದೇಶದ ಜೊತೆಗಿನ “ಆಶ್ರಮ ಭೇಟಿ” ಪರಿಕಲ್ಪನೆ ಮಾದರಿಯಾಗಿದೆ ಮತ್ತು ಶಿಕ್ಷಣ ಜೊತೆಗೆ ಇವರ ಸೇವಾ ಚಟುವಟಿಕೆಗಳು ಖುಷಿ ನೀಡಿದೆ ಎಂದರು.
ಆಳ್ವಾಸ್ ರಾಷ್ಟೀಯ ಸ್ವಯಂ ಸೇವಾ ಯೋಜನಾಧಿಕಾರಿಗಳು, ಅಧ್ಯಾಪಕರಾದ ವಸಂತ್, ಅಕ್ಷತಾ ಪ್ರಭು ಅವರು ಆಶ್ರಮದ ಮಕ್ಕಳಿಗೆ ಬೇಕಾದ ಆಟದ ಪರಿಕರಗಳನ್ನು ಮತ್ತು ಹಣ್ಣು ಹಂಪಲುಗಳನ್ನು ಆಶ್ರಮಕ್ಕೆ ವಿತರಿಸಿ, ತನುಲಾ ಅವರ ಈ ಸೇವಾ ಕಾರ್ಯಕ್ಕೆ ಅಭಿನಂದಿಸಿ ಸನ್ಮಾನಿಸಿದರು.
“ಹೊಸಬೆಳಕು ಸಾಕ್ಷ್ಯಚಿತ್ರ” ಪ್ರದರ್ಶನದ ಮೂಲಕ ಆಶ್ರಮದ ಕಾರ್ಯವೈಖರಿಯ ಮಾಹಿತಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಾಕ್ಷ್ಯಚಿತ್ರ ಕುರಿತು ಪ್ರಮೋದ್ ಆತ್ರಾಡಿ ಮಾತಾನಾಡಿ, ಹೆಚ್ಚು ಪ್ರಚಾರ ಆಡಂಬರವಿಲ್ಲದೆ ಸೇವೆಯೊಂದೆ ಮುಖ್ಯ ಧ್ಯೇಯ ಎಂದು ಕಳೆದ ಹತ್ತು ವರ್ಷಗಳಿಂದ ಸಮಾಜದಲ್ಲಿ ಬದುಕು ಕತ್ತಲಾದ 180ಕ್ಕೂ ಹೆಚ್ಚು ನಿರಾಶ್ರಿತರ, ಅನಾಥರ ಬಾಳಿಗೆ ಬೆಳಕಾದ “ಹೊಸ ಬೆಳಕು” ಮಾಡಿದ ಸೇವೆ ಅನನ್ಯ.
ವೈಯಕ್ತಿಕವಾಗಿ ಯಾವುದೇ ಫಲಾಪೇಕ್ಷೆ ಬಯಸದ ಇವರ ಇಂತಹ ಸೇವೆ, ಸಮಾಜಕ್ಕೆ ನಿಜಕ್ಕೂ ಸ್ಪೂರ್ತಿ ಮತ್ತು ಇವರ ಸೇವೆಗೆ ಸಮಾಜದಿಂದ ಇನ್ನಷ್ಟು ಸಹಕಾರ ಒದಗಿ ಬರಬೇಕು ಎಂದರು.
ವಿದ್ಯಾರ್ಥಿ ಪ್ರತಿನಿಧಿ ಸ್ವಾಮಿ ಶಶಾಂಕ್ ಮಾತನಾಡಿ, ಹೊಸಬೆಳಕು ಆಶ್ರಮ ತನ್ನ ಹೆಸರಿನನುಸಾರ ಸೇವೆ ಮಾಡುತ್ತ ಬಂದಿದೆ, ತುಂಬಾ ಚೆನ್ನಾಗಿ ಬದುಕಿದವರು ಬದುಕಿನ ಮಧ್ಯದಲ್ಲಿ ಕುಸಿದುಬಿದ್ದಾಗ ಅವರನ್ನು ಮೇಲೆತ್ತಿ ಎರಡನೇ ಹಂತದ ಜೀವನ ಕಲ್ಪಿಸಿದ ಯಶಸ್ಸು ಇದಕ್ಕೆ ಸಲ್ಲುತ್ತದೆ.ಹೆಚ್ಚು ಮಾತನಾಡದೆ ತನ್ನ ಸೇವೆಯೇ ಇತಿಹಾಸವಾಗಿ ಮಾತನಾಡುವಂತೆ ಮಾಡಿದ ಆಶ್ರಮದ ಸಂಸ್ಥಾಪಕರಾದ ತನುಲಾ ತರುಣ್ ಮತ್ತು ವಿನಯ ಚಂದ್ರ ಅವರು ನಿಜಕ್ಕೂ ನಮ್ಮ ನಡುವೆ ಅಪರೂಪ ಮತ್ತು ಶ್ರೇಷ್ಠ ವ್ಯಕ್ತಿತ್ವಗಳ ಸಾಲಿಗೆ ಸೇರುವಂಥವರಾಗಿದ್ದಾರೆ ಎಂದರು.
ತದನಂತರ ಸ್ವಯಂ ಸೇವಾ ಯೋಜನಾ ವಿದ್ಯಾರ್ಥಿಗಳಿಂದ ಹಾಗೂ ಆಶ್ರಮ ಮಕ್ಕಳಿಂದ ಗಾಯನ, ನೃತ್ಯ ಕಾರ್ಯಕ್ರಮ ನಡೆಯಿತು.
ಪ್ರಮೋದ್ ಆತ್ರಾಡಿ ಸ್ವಾಗತಿಸಿ, ಆದಿತ್ಯ ನಾಯಕ್ ವಂದಿಸಿದರು.