
ಬೆಂಗಳೂರು: ಭಾರತವು ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತಿಕಾರವಾಗಿ ‘ಆಪರೇಷನ್ ಸಿಂಧೂರ್’ ಮೂಲಕ ಪಾಕಿಸ್ತಾನ ಹಾಗೂ ಪಿಒಕೆ ಒಳಗೆ ಇದ್ದ 9 ಉಗ್ರರ ನೆಲೆಗಳನ್ನು ಸೇನೆ ನಾಶಪಡಿಸಿದೆ. ಸೇನೆ, ನೌಕಾಪಡೆ ಮತ್ತು ವಾಯುಪಡೆ ಜಂಟಿಯಾಗಿ ಕಾರ್ಯಚರಣೆ ನಡೆಸಿದ್ದು ಸೇನೆಯ ನಡೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕೀಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ “ಆಪರೇಷನ್ ಸಿಂಧೂರ್ ಹಿಂದೆ ನಮ್ಮ ಸಶಸ್ತ್ರ ಪಡೆಗಳ ಅಸಾಧಾರಣ ಧೈರ್ಯಕ್ಕೆ ನಾನು ವಂದಿಸುತ್ತೇನೆ. ಅವರ ವೀರೋಚಿತ ಕ್ರಮವು ಭಾರತವು ಯಾವುದೇ ರೀತಿಯ ಭಯೋತ್ಪಾದನೆಯನ್ನು ಎಂದಿಗೂ ಸಹಿಸುವುದಿಲ್ಲ ಎಂದು ಪುನರುಚ್ಚರಿಸುತ್ತದೆ. ಪಹಲ್ಗಾಮ್‌ನಲ್ಲಿ ನಡೆದ ಕ್ರೂರ ದಾಳಿಯು ಕೇವಲ ಮುಗ್ಧ ಜೀವಗಳ ಮೇಲೆ ಅಲ್ಲ, ಇದು ಭಾರತದ ಕನಸುಗಳು ಮತ್ತು ಚೈತನ್ಯದ ಮೇಲಿನ ದಾಳಿಯಾಗಿದೆ. ಕರ್ನಾಟಕವು ನಮ್ಮ ಪಡೆಗಳೊಂದಿಗೆ ಅಚಲವಾದ ಒಗ್ಗಟ್ಟನ್ನು ವ್ಯಕ್ತಪಡಿಸುವಲ್ಲಿ ರಾಷ್ಟ್ರದೊಂದಿಗೆ ಸೇರುತ್ತದೆ. ನಿಮ್ಮ ಶೌರ್ಯ, ತ್ಯಾಗ ಮತ್ತು ನಮ್ಮ ಸಾರ್ವಭೌಮತ್ವವನ್ನು ರಕ್ಷಿಸಲು ನಾವು ಹೆಮ್ಮೆ ಪಡುತ್ತೇವೆ. ನಮ್ಮ ಭೂಮಿಯಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ. ಭಾರತವು ಶಕ್ತಿ ಮತ್ತು ಏಕತೆಯಿಂದ ಪ್ರತಿಕ್ರಿಯಿಸುತ್ತದೆ” ಎಂದು ಹೇಳಿದ್ದಾರೆ.
“ಕಾಂಗ್ರೆಸ್ ಪ್ರಯೋಗಿಸಿದ ಮನುಕುಲದ ಅತ್ಯಂತ ಪ್ರಬಲ ಅಸ್ತ್ರ “ಶಾಂತಿ”ಯ ಫಲವಾಗಿಯೇ ಉಗ್ರರು ದೇಶದ ಒಳಗೆ ಬಂದಿದ್ದು, ಈ ಅಸ್ತ್ರದ ಫಲವಾಗಿಯೇ ಮುಂಬಯಿ ದಾಳಿ ನಡೆದಿದ್ದು, ಇದರ ಫಲವಾಗಿಯೇ ದೇಶದ ವಿರುದ್ಧ ಪಾಕಿಸ್ತಾನ ನಿರಂತರ ಉಗ್ರ ಚಟುವಟಿಕೆ ನಡೆಸಿದ್ದು, ಈ ಅಸ್ತ್ರದ ಫಲವಾಗಿಯೇ ದೇಶದೊಳಗೆ ಪಾಕಿಸ್ತಾನ ಜಿಂದಾಬಾದ್ ಎನ್ನುವವರ ಸಂಖ್ಯೆ ಹೆಚ್ಚಿದ್ದು, ಉಗ್ರ ರಾಷ್ಟ್ರದ ವಿರುದ್ಧ ಭಾರತ ನಡೆಸಿದ ನಿರ್ದಿಷ್ಟ ದಾಳಿಯನ್ನು ಅಣುಕಿಸುವ ರೀತಿಯಲ್ಲಿ ರಾಜ್ಯ ಕಾಂಗ್ರೆಸ್ ಘಟಕ ಮಾಡಿರುವ ಈ ಪೋಸ್ಟ್ ಕೀಳು ಅಭಿರುಚಿಯಿಂದ ಕೂಡಿದೆ. ಯುದ್ಧ ಬೇಡ ಎಂದ @siddaramaiah ನವರ ಮನಸ್ಥಿತಿಯನ್ನು ಆ ಪಕ್ಷದ ಸಾಮಾಜಿಕ ಜಾಲತಾಣ ಖಾತೆಯೂ ಅನಾವರಣ ಮಾಡಿದೆ” ಎಂದು ಸುನಿಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ರಾಜ್ಯದ ಡಿಸಿಎಂ ಡಿಕೆ ಶಿವಕುಮಾರ್ ಟ್ವೀಟ್ ಮಾಡಿ “ಆಪರೇಷನ್ ಸಿಂಧೂರ್ ರಣಹೇಡಿ ಪಾಕಿಸ್ತಾನಕ್ಕೆ ತಕ್ಕ ಉತ್ತರ. ಪಹಲ್ಗಾಮ್ ಅಟ್ಯಾಕ್ ಗೆ ಸರಿಯಾದ ಉತ್ತರ. ನಾವು ಕೇಂದ್ರ ಸರ್ಕಾರದ ಜೊತೆ ನಿಲ್ತೇವೆ. ನಮ್ಮ ಭದ್ರತಾ ಪಡೆಗಳ ಜೊತೆ ನಿಲ್ತೇವೆ. ಜೈ ಹಿಂದ್” ಎಂದು ಬರೆದುಕೊಂಡಿದ್ದಾರೆ.
ಇನ್ನು ನಿಖಿಲ್ ಕುಮಾರಸ್ವಾಮಿ ಈ ಕುರಿತು ಪ್ರತಿಕ್ರಿಯಿಸಿ “ಆಪರೇಷನ್ ಸಿಂಧೂರ್ ಕೇವಲ ಒಂದು ದಾಳಿಯಲ್ಲ, ಇದು ಹಣೆಯ ಮೇಲೆ ಹಚ್ಚಿದ ರಾಷ್ಟ್ರೀಯ ಸಿಂಧೂರ. ಭಾರತ ಹೊಡೆದಾಗ ಜಗತ್ತು ನೋಡುತ್ತದೆ… ಮತ್ತು ಸ್ವಲ್ಪ ನಡುಗುತ್ತದೆ. ಆಪರೇಷನ್ ಸಿಂಧೂರ ಕೇವಲ ದಾಳಿಯಲ್ಲ, ಇದು ಭಾರತದ ಸಾರ್ವಭೌಮತ್ವದ ಸಂಕೇತ. ಭಾರತೀಯ ಸೇನೆಯ ಧೈರ್ಯ ಮತ್ತು ಪ್ರಧಾನಿ ಶ್ರೀ @narendramodi ಜಿ ಅವರ ನಿರ್ಭೀತ ನಾಯಕತ್ವಕ್ಕೆ ನನ್ನ ನಮನಗಳು. ನವಭಾರತವು ಎಚ್ಚರಿಸುವುದಷ್ಟೇ ಅಲ್ಲ, ಅದು ತನ್ನ ಕರ್ತವ್ಯ ನಿರ್ವಹಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.
‘ಆಪರೇಷನ್ ಸಿಂಧೂರ’ಕ್ಕೆ ಜಯವಾಗಲಿ. ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ಕೈಗೊಂಡಿರುವ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಯಶಸ್ವಿಯಾಗಲಿ. ಉಗ್ರ ಪೋಷಕ ರಾಷ್ಟ್ರ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಕಾಶ್ಮೀರದಲ್ಲಿನ ಭಯೋತ್ಪಾದಕರ ಅಡಗು ತಾಣ ಮತ್ತು ಶಿಬಿರಗಳ ಮೇಲೆ ಭಾರತೀಯ ಸೇನೆ ನಿಖರ ದಾಳಿ ಮಾಡಿ ಧ್ವಂಸ ಗೊಳಿಸಿದೆ. ಪಾಕಿಸ್ತಾನದ ಉಗ್ರರ ಸಂಹಾರಕ್ಕಾಗಿ ಕೈಗೊಂಡಿರುವ “ಆಪರೇಷನ್ ಸಿಂಧೂರ್” ಸೇನಾ ಕಾರ್ಯಾಚರಣೆ”ಯನ್ನು @JanataDal_S ಪಕ್ಷವು ಬೆಂಬಲಿಸುತ್ತದೆ ಮತ್ತು ಸ್ವಾಗತಿಸುತ್ತದೆ ಎಂದು ಜನತಾ ದಳ ಟ್ವೀಟ್ ಮಾಡಿದೆ.
ಇನ್ನು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿ ಭಯೋತ್ಪಾದಕರು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಎಸಗಿದ ಹೇಡಿತನದ ಪೈಶಾಚಿಕ ಕೃತ್ಯಕ್ಕೆ ನಮ್ಮ ಹೆಮ್ಮೆಯ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಭಯೋತ್ಪಾದನೆಯ ಮೂಲೋತ್ಪಾಟನೆಗೆ ಈ ದಿಟ್ಟ ಕ್ರಮ ಮುನ್ನುಡಿಯಾಗಲಿ. ಭಾರತೀಯ ಸೇನೆಯ ಪರಾಕ್ರಮ, ಶೌರ್ಯ, ನಿಖರತೆ ಶ್ಲಾಘನೀಯ. ಭಯೋತ್ಪಾದನೆಯ ವಿರುದ್ಧ, ದೇಶದ ಐಕ್ಯತೆ, ಸಮಗ್ರತೆ, ಸುರಕ್ಷತೆಗೆ ಸಂಬಂಧಿಸಿದಂತೆ ಭಾರತೀಯ ಸೇನೆ ಹಾಗೂ ಕೇಂದ್ರ ಸರ್ಕಾರದ ಎಲ್ಲ ಕ್ರಮಗಳನ್ನೂ ನಾವು ಬೆಂಬಲಿಸುತ್ತೇವೆ ಎಂದು ಹೇಳಿದೆ.













