ಸಾಧನೆಯ ಸೌಗಂಧ ಹೊತ್ತ ವ್ಯಕ್ತಿ, ಸಮಾಜಕ್ಕೆ ಶಕ್ತಿ
ರೇಷ್ಮಾ ಶೆಟ್ಟಿ,ಗೊರೂರು

ಕನಸು ಕಾಣುವ ಕಂಗಳಿಗೆ ಅದೆಷ್ಟು ಸಂಕಷ್ಟಗಳು ಎದುರಾದರೂ ಆ ಕನಸನ್ನು ನನಸಾಗಿಸುವ ಛಲ ಹುಟ್ಟಿತೆಂದರೆ ಅಲ್ಲೊಂದು ಅದ್ಬುತವೇ ನಡೆದುಬಿಡಬಹುದು.ಅಸಾಧಾರಣ ಸಾಧಕರೇ ಸೃಷ್ಟಿಯಾಗಬಹುದು…
ಅದೆಲ್ಲೋ ನಿಂತ ನೀರೊಳಗೂ ತಾವರೆಯ ಪುಷ್ಪವೊಂದು ಅರಳಿ ನಿಂತು ಸರ್ವರನ್ನೂ ತನ್ನತ್ತ ಆಕರ್ಷಸುವಂತೆ ಸಾಧನೆಯ ಸೌಗಂಧ ಹೊತ್ತ ವ್ಯಕ್ತಿಯೋರ್ವ ಅಚಲ ಭಕ್ತಿಯೊಂದಿಗೆ ಸಮಾಜ ಕೊಂಡಾಡುವ ಶಕ್ತಿಯಾಗಿ ಎದ್ದು ನಿಲ್ಲಬಹುದು….
ಹುಟ್ಟುಬಡತನವಾದರೇನು ಸಾಧನೆಗೆ ಬಡತನ ಬರಬಾರದು, ಸಾಧನೆ ಮಾಡುತ್ತೇನೆ ಎಂದು ಹೊರಡುವ ಯಾರೇ ಆದರೂ ಆರ್ಥಿಕ ಬಡತನವಿದ್ದರೂ ಹೃದಯ ಶ್ರೀಮಂತರಾಗಿ ಮುನ್ನಡೆಯಬೇಕು, ಆಗ ಹೊಳೆಯುವ ವಜ್ರದಂತೆ ಸರ್ವರಿಗೂ ಗೋಚರಿಸಲು ಸಾಧ್ಯವಾಗಬಹುದು.
ಇವರ್ಯಾಕೆ ಇಷ್ಟೆಲ್ಲ ಪೀಠಿಕೆ ಹಾಕುತ್ತಿದ್ದಾರೆ ಅಂದುಕೊಳ್ಳುತ್ತಿದ್ದೀರಾ….
ಖಂಡಿತ ಹೀಗೊಬ್ಬ ಉದ್ಭವಿಸಿದ ಉನ್ನತ ಸಾಧಕನ ಬೆನ್ನುತಟ್ಟಿದಾಗ ಅಲ್ಲಿ ಮಂಥನವಾದ ವಿಚಾರಗಳ ಪೀಠಿಕೆಯೇ ಇದು..
ಆತನ ಹೆಸರು ಪ್ರವೀಣ್ ಸೇರಿಗಾರ.ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನ ಮುದ್ರಾಡಿ ಗ್ರಾಮದ ಬೆಳಗುಂಡಿ ಶೇಖರ್ ಸೇರಿಗಾರ ಮತ್ತು ಪುಷ್ಪ ಶೇಖರ್ ಸೇರಿಗಾರ ದಂಪತಿಗಳ ತೃತೀಯ ಸುಪುತ್ರ.ಇಬ್ಬರು ಸಹೋದರರ ನಂತರ ಒಂದು ಹೆಣ್ಣುಮಗುವಾಗಬಹುದೆ0ಬ ಅಪ್ಪ ಅಮ್ಮನ ಕನಸನ್ನು ಹುಸಿಯಾಗಿಸಿ ಮತ್ತೆ ಗಂಡು ಮಗುವಾಗಿ 16 ನೇ ನವೆಂಬರ್ 2001 ರಂದು ಭೂಮಿಗೆ ಬಿದ್ದವನು.
ಓದಿದ್ದು ಬೆಳೆದಿದ್ದು ಮುದ್ರಾಡಿ ಪರಿಸರದಲ್ಲೇ.ಒಂದರಿಂದ ನಾಲ್ಕನೇ ತರಗತಿಯವರೆಗೆ ಹತ್ತಿರದ ಉಪ್ಪಳ ಪ್ರಾಥಮಿಕ ಶಾಲೆಯಲ್ಲಿ ಮುಂದೆ 7 ನೇ ತರಗತಿಯವರೆಗೆ ಸ್ಥಳೀಯ ಮುದ್ರಾಡಿ ಶಾಲೆಯಲ್ಲಿ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ಸರ್ಕಾರಿ ಪ್ರೌಢ ಶಾಲೆ ಮುನಿಯಾಲಿನಲ್ಲಿ ಮುಗಿಸಿ ವಿಧ್ಯಾಭ್ಯಾಸ ಅಲ್ಲಿಗೇ ಮೊಟಕುಗೊಳಿಸಿಕೊಂಡವನು. ಶಿಕ್ಷಣದ ಬಗ್ಗೆ ಕೇಳಿದಾಗ ತೀರಾ ತಮಾಷೆಯಾಗಿ ಮಾತನಾಡುವ ಈತ ನಾನು ಅತ್ಯಂತ ಬುದ್ದಿವಂತ ಆಗಿರುವುದರಿಂದ 10 ನೇ ತರಗತಿಯಿಂದ ಮತ್ತೆ ಮುಂದೆ ಸಾಗುವುದು ಬೇಡ ಅನ್ನಿಸಿತು ಎಂದು ಕಿರು ನಗೆ ಬೀರಿ ಅಭಿರುಚಿ ಇರದ ವಿದ್ಯೆ ಕಲಿಯುವುದು ವ್ಯರ್ಥ ಎನ್ನುವಂತೆ ಮಾತನಾಡುತ್ತಾನೆ..
ಅಂದಹಾಗೆ ಪುಸ್ತಕದ ವಿದ್ಯೆಯೊಳಗೆ ತಾಯಿ ಶಾರದೇ ಪೂರ್ಣ ಪ್ರಮಾಣದಲ್ಲಿ ಕೈ ಹಿಡಿದು ಮುನ್ನಡೆಸದಿದ್ದರೇನಂತೆ ಬದುಕೆಂಬ ಪುಸ್ತಕದಲ್ಲಿ ಬದುಕಿಗೆ ಬೇಕಾದ ವಿದ್ಯೆಯೊಂದಿಗೆ ಮುನ್ನಡೆಸಿದ ಕೀರ್ತಿ ಅವಳಿಗೇ ಸಲ್ಲುತ್ತದೆ.
ಇವನಿಗೆ ತಮ್ಮದೇ ಸಮುಧಾಯದ ವೃತ್ತಿಯಾದ ವಾದ್ಯ ( ವಾಲಗ )ನುಡಿಸುವುದನ್ನು ಕಲಿಯಿವ ಹುಚ್ಚು…ಆದರೆ ಇದಕ್ಕೆ ಪೂರಕ ವಾತಾವರಣ ಸಿಕ್ಕಿರಲಿಲ್ಲ, ಪ್ರೋತ್ಸಾಹಿಸಿ ಜೊತೆನಿಲ್ಲುವವರೂ ಜೊತೆಗಿರಲಿಲ್ಲ, ಅದೊಂದು ದಿನ ತನ್ನ ಆಸೆಯನ್ನು ವ್ಯಕ್ತಪಡಿಸಿದಾಗ ಗುರುವಾಗಿ ಮಾರ್ಗದರ್ಶಕರಾಗಿ ಜೊತೆನಿಂತವರು ಶ್ರೀಯುತ ಮುದ್ರಾಡಿ ಭಕ್ರೆ ಚಂದ್ರಶೇಖರ್ ಸೇರಿಗಾರರು.
ಎಲ್ಲೊ ಮೂಲೆಯಲ್ಲಿ ಬಿದ್ದಿದ್ದ ಕಲ್ಲೊಂದನ್ನು ಶಿಲ್ಪಿಯೋರ್ವ ಸುಂದರವಾಗಿ ಕೆತ್ತಿ ದೇವರಮೂರ್ತಿಯನ್ನಾಗಿಸಿದರೆ ಆ ಮೂರ್ತಿಗೆ ಲೋಕದ ಎಲ್ಲ ಜನರು ಭಕ್ತಿಯಿಂದ ಶಿರಬಾಗಿ ಕರಮುಗಿಯುತ್ತಾರೆ, ಅಂತೆಯೇ ಪ್ರವೀಣ್ ಪಾಲಿಗೆ ಸಿಕ್ಕ ಗುರು ಅವರಲ್ಲಿಯ ಕಲೆಯನ್ನು ಪ್ರಸ್ತುತ ಪಡಿಸುವಲ್ಲಿ ಪೂರ್ಣ ಪ್ರಮಾಣದ ಬೆಂಬಲವಿತ್ತು ತಿದ್ದಿ ತೀಡಿ ಸಮಾಜ ಕೊಂಡಾಡುವ ಸಾಧಕನನ್ನಾಗಿಸಿ ಬಿಡುತ್ತಾರೆ, ಸದಾ ಗುರುವಿನ ಮಾರ್ಗದರ್ಶನವನ್ನು ಸ್ಮರಿಸುವ ಪ್ರವೀಣರು, ಚಂದ್ರಶೇಖರ ಸೇರಿಗಾರ ಗುರುಗಳು ನನ್ನ ಪಾಲಿನ ಪ್ರತ್ಯಕ್ಷ ದೇವರು,ನನ್ನ ಇಂದಿನ ಅನ್ನದ ಬಟ್ಟಲು ಎಂದು ಅತ್ಯಂತ ಭಾವುಕವಾಗಿಯೇ ಹೊಗಳುತ್ತಾರೆ.
ಪ್ರವೀಣ್ ಸೇರಿಗಾರ ಅವರು ಸಮರ್ಥ ವಾದ್ಯ ಸಾಧಕನಾಗಿ ನಿಂತಾಗ ಅನೇಕರು ಆವರ ವಿರುದ್ಧ ನಿಂತ, ಅವಮಾನಿಸಿ ನಿಂದಿಸಿದ ಅದೆಷ್ಟೋ ನೋವಿನ ಸಂಗತಿಗಳನ್ನು, ಬದುಕಿನ ಜೊತೆಗಿರುವ ದುಃಖಕರ ಸಂಗತಿಗಳನ್ನು ನೆನಪಿಸಿಕೊಂಡು ಈಗಲೂ ಭಾವುಕರಾಗುತ್ತಾರೆ.
ಎಲ್ಲರೂ ಬೆನ್ನುತಟ್ಟಿ ಪ್ರೋತ್ಸಾಹಿಸುವುದಿಲ್ಲ,ಕೆಲವರು ನಮ್ಮನ್ನು ತುಳಿದು ಬೆಳೆಯುವ ಪ್ರಯತ್ನ ಮಾಡುತ್ತಾರೆ ಆಗ ಮನಸ್ಸಿಗೆ ನೋವಾಗುವುದು ಸಹಜ, ಆದರೆ ನಾವು ಮಾಡುವ ಯಾವುದೇ ಕಾರ್ಯದಲ್ಲಿ ಶೃದ್ಧೆ, ನಂಬಿಕೆಯಿದ್ದರೆ ನಂಬಿದ ದೇವರು ಎಂದಿಗೂ ನಮ್ಮ ಕೈಬಿಡುವುದಿಲ್ಲ ಎನ್ನುವುದು ಆವರ ಆಶಾವಾದವಾಗಿದೆ.
ತಾನು ನಂಬಿದವರಿಂದಲೇ, ಗೌರವದಿಂದ ಪ್ರೀತಿಯಿಂದ ಕಂಡವರಿಂದಲೇ ತಿರಸ್ಕರಿಸಲ್ಪಟ್ಟ ಪ್ರವೀಣ್ ಎಂಬ ನಾದಮಯ ಕೊಳಲುವಾದಕ, ವಾದ್ಯಘೋಷಕ ಇಂದು ಕರ್ನಾಟಕದ ಸಾವಿರಾರು ಹೃದಯವಂತರ ಹೃದಯಗೆದ್ದ ಅಪ್ಪಟ ಸಾಧಕ..
ಬದುಕಿನಲ್ಲಿ ನೋವು ತಿನ್ನದೇ ಇತಿಹಾಸ ಬರೆದವರಿಲ್ಲ, ಪ್ರತಿಯೋರ್ವ ಉತ್ತಮ ಸಾಧಕನ ಹಿಂದೆ ಹೇಳಿಕೊಳ್ಳಲಾಗದ ಅದೆಷ್ಟೋ ಸಾವಿರ ಕಥೆಗಳಿರುತ್ತವೆ. ಆ ಎಲ್ಲ ಕತೆಗಳಲ್ಲಿ ಬರುವ ಕೆಲವೊಂದು ಪಾತ್ರಗಳೇ ಬದುಕಿನ ಏಳಿಗೆಯ ಸೂತ್ರಗಳೂ ಆಗುತ್ತವೆ ಅನ್ನುವುದಕ್ಕೆ ಶ್ರೇಷ್ಠ ಉದಾಹರಣೆ ನಮ್ಮೆಲ್ಲರ ನಡುವೆ ಸಾಮಾನ್ಯರಿಗಿಂತ ಸಾಮಾನ್ಯನಾಗಿ ಸದಾ ನಗು ಮೊಗ ಹೊತ್ತು ಸಾಗುವ ಸಾಧಕ ಪ್ರವೀಣ್ ಓರ್ವರಾಗಿ ಗೋಚರಿಸುತ್ತಾರೆ.
ದೈವಗಳ ನೆಮೋತ್ಸವ, ದರ್ಶನ ಸೇವೆ, ಮದುವೆ, ಜಾತ್ರೆ, ದೇವಸ್ಥಾನಗಳ ಪೂಜಾ ಕೈಂಕರ್ಯಗಳಲ್ಲಿ, ಇತ್ಯಾದಿ ಯಾವುದೇ ಕಾರ್ಯಕ್ರಮಗಳಲ್ಲೂ ಕೂಡ ಇವರ ವಾದ್ಯ ತಂಡಕ್ಕೆ ಅವಕಾಶ ಕೊಟ್ಟರೆ ಅತ್ಯುತ್ತಮ ಪ್ರದರ್ಶನ ನೀಡುವುದರ ಮೂಲಕ ಲಕ್ಷಾಂತರ ಜನರ ಹೃದಯಗೆಲ್ಲುತ್ತಾರೆ.
ನಿಮಗೆ ನಿಮ್ಮ ಈ ಅದ್ಬುತ ಸೇವೆಯ ಹಿಂದಿನ ಸ್ಫೂರ್ತಿದಾತರು ಯಾರೂ ಎಂದು ಪ್ರಶ್ನೆ ಮಾಡಿದರೆ ಈ ಕಿರಿಯ ವಯಸ್ಸಿನ ಹುಡುಗ ಹಿರಿತನದ ಮಾತನ್ನಾಡುತ್ತಾರೆ , ನನ್ನದೇನಿದೆ ಸಾಧನೆ, ಈ ಕಾರ್ಯದಲ್ಲಿ ಯಶಸ್ವೀ ಮುನ್ನಡೆ ಕಂಡು ಬದುಕನ್ನು ಬೆಳದಿಂಗಳ ಬೆಳಕಾಗಿಸಿಕೊಂಡವರ ನಡುವೆ ನಾನೇನಿದ್ದರೂ ಶೂನ್ಯವೇ ಸರೀ.. ಅಂತಹ ಮಹಾನ್ ಸಾಧನೆ ಮಾಡಿದ ವಾದ್ಯ ಪಂಡಿತರು, ಕೊಳಲು ಸಾಧಕರೆಲ್ಲರೂ ನನಗೇ ಸ್ಫೂರ್ತಿದಾತರೇ ಎನ್ನುವುದರೊಂದಿಗೆ ನಾನಿನ್ನು ಕಲಿಕಾರ್ಥಿ ಇದರಲ್ಲಿ ಪ್ರಚಂಡ ಜಯಭೇರಿ ಗಳಿಸಿದ ದಿಗ್ಗಜರೆಲ್ಲರ ಆಶೀರ್ವಾದಗಳನ್ನು ಬೇಡುತ್ತ, ಬಲ ತುಂಬುವ ಸ್ನೇಹಿತರ ಪ್ರೀತಿ ಬಯಸುತ್ತ ಅವರೆಲ್ಲರನ್ನು ಸ್ಫೂರ್ತಿಯಾಗಿಸುತ್ತೇನೆ ಎನ್ನುತ್ತಾರೆ.
ಇಂತಹ ಸಾಧಕನಿಗೆ ಸಾಧನೆ ಪ್ರದರ್ಶಿಸಲು ಉತ್ತಮ ವೇದಿಕೆಗಳು,ಅವಕಾಶಗಳು ಸದಾಕಾಲ ದೊರಕುತ್ತಿರಲಿ. ಆ ಮೂಲಕ ಪ್ರವೀಣರ ಪ್ರಾವಿಣ್ಯತೆಯನ್ನು ಲೋಕ ಕೊಂಡಾಡಲಿ ಎಂಬ ಆಶಯದೊಂದಿಗೆ ಸದಾ ಶುಭ ಹಾರೈಕೆಗಳನ್ನು ಹಾರೈಸೋಣ.
































