
ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ದಾಖಲೆರಹಿತ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು ಈ ಬಗ್ಗೆ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿ ಪರಿಶೀಲಿಸಿದ ಅಕ್ರಮ ವಲಸಿಗರನ್ನು ವಾಪಾಸ್ ಪಡೆಯಲು ಭಾರತ ಸಿದ್ಧವಾಗಿದೆ ಎಂದು ಅಮೆರಿಕಕ್ಕೆ ಭರವಸೆ ನೀಡಿದ್ದಾರೆ.
ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 104 ಭಾರತೀಯರನ್ನು ಗಡೀಪಾರು ಮಾಡಿ ಭಾರತಕ್ಕೆ ಹಿಂತಿರುಗಿಸಿದ ಕೆಲವೇ ದಿನಗಳಲ್ಲಿ ಮೋದಿ ಈ ಹೇಳಿಕೆ ನೀಡಿದ್ದು ಅಕ್ರಮ ವಲಸಿಗರು ಅಮೆರಿಕದ ಮಿಲಿಟರಿ ಸಿ -17 ಗ್ಲೋಬ್‌ಮಾಸ್ಟರ್ ವಿಮಾನದಲ್ಲಿ ಅಮೃತಸರಕ್ಕೆ ಆಗಮಿಸಿದ್ದರು. ಇದು ಟ್ರಂಪ್ ಆಡಳಿತ ವಲಸಿಗರ ವಿರುದ್ಧ ತೆಗೆದುಕೊಂಡ ಕಠಿಣ ಕ್ರಮದ ಅಡಿಯಲ್ಲಿ ಗಡೀಪಾರು ಮಾಡಲಾದ ಭಾರತೀಯರ ಮೊದಲ ಬ್ಯಾಚ್ ಆಗಿದೆ. 2 ಮತ್ತು 3ನೇ ಬ್ಯಾಚ್ನ ಅಕ್ರಮ ವಲಸಿಗರು ಈ ವಾರ ಭಾರತಕ್ಕೆ ಹಿಂತಿರುಗಲಿದ್ದಾರೆ ಎಂದು ವರದಿಯಾಗಿದೆ.
ಭಾರತದ ನಾಗರಿಕರಾದವರು ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರೆ ಭಾರತ ಅವರನ್ನು ಮರಳಿ ಸ್ವೀಕರಿಸಲು ಸಿದ್ಧವಾಗಿದೆ ಎಂದು ನಾವು ಈ ಹಿಂದೆಯೂ ಹೇಳಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಜೊತೆಗೆ ಸರ್ಕಾರಗಳು ಕುಟುಂಬಗಳನ್ನು ದಾರಿ ತಪ್ಪಿಸುವ ಮತ್ತು ಅಮೆರಿಕಕ್ಕೆ ಕರೆತರುವ ಮಾನವ ಕಳ್ಳಸಾಗಣೆ ವ್ಯವಸ್ಥೆಯ ಮೇಲೆಯೂ ದಾಳಿ ಮಾಡಬೇಕು ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಿ ಹೇಳಿದ್ದಾರೆ.



















