
ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿ ಗುರುತಿಸಲ್ಪಟ್ಟಿದ್ದ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಒಟ್ಟು 23 ಮಂದಿಯನ್ನು ನ್ಯಾಯಾಲಯವು ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ. ಪ್ರಕರಣದಿಂದ ಮುಕ್ತರಾದ ಬೆನ್ನಲ್ಲೇ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಗೆ ಸವಾಲು ಹಾಕಿ, ದೆಹಲಿಯಲ್ಲಿ ಮರುಚುನಾವಣೆ ನಡೆಸುವಂತೆ ಆಗ್ರಹಿಸಿದ್ದಾರೆ.
ಇಂದೇ ಚುನಾವಣೆಯನ್ನು ನಡೆಸಿ ಬಿಜೆಪಿ 10ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದರೆ, ತಾವು ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಕೇಜ್ರಿವಾಲ್ ಘೋಷಿಸಿದ್ದಾರೆ. ಶುಕ್ರವಾರ ರೌಸ್ ಅವೆನ್ಯೂ ನ್ಯಾಯಾಲಯವು ತೀರ್ಪು ನೀಡುತ್ತಾ, ಸಿಬಿಐ ತನಿಖೆಯನ್ನು ತೀವ್ರವಾಗಿ ಟೀಕಿಸಿತು. ಆರೋಪಗಳನ್ನು ದೃಢವಾದ ಸಾಕ್ಷ್ಯಾಧಾರಗಳೊಂದಿಗೆ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೆಹಲಿಯ ಪರಿಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿದ ಕೇಜ್ರಿವಾಲ್ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಅಧಿಕಾರದ ಹಂಬಲದಿಂದ ದೆಹಲಿಯ ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ದೆಹಲಿಯ ಜನರನ್ನು ಸಂಪರ್ಕಿಸಿ ಅವರ ಅಭಿಪ್ರಾಯವನ್ನು ತಿಳಿಯುವಂತೆ ಬಿಜೆಪಿ ನಾಯಕರಿಗೆ ಸವಾಲು ಹಾಕಿದ ಅವರು, “ಧೈರ್ಯವಿದ್ದರೆ ಮತ್ತೆ ಚುನಾವಣೆ ನಡೆಸಿ; ಹತ್ತು ಸ್ಥಾನಗಳಿಗಿಂತ ಹೆಚ್ಚು ಗೆದ್ದರೆ ನಾನು ರಾಜಕೀಯ ತ್ಯಜಿಸುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆದ್ದ ಬಿಜೆಪಿ ದೆಹಲಿಯಲ್ಲಿ ಅಧಿಕಾರಕ್ಕೇರಿತ್ತು. ಅದೇ ವೇಳೆ, ಆಮ್ ಆದ್ಮಿ ಪಕ್ಷವು 22 ಸ್ಥಾನಗಳಿಗೆ ಸೀಮಿತವಾಗಿತ್ತು. ಇದರ ಮೊದಲು ನಡೆದ ಎರಡು ಚುನಾವಣೆಯಲ್ಲಿ 2015ರಲ್ಲಿ 67 ಮತ್ತು 2020ರಲ್ಲಿ 62 ಸ್ಥಾನಗಳನ್ನು ಆಮ್ ಆದ್ಮಿ ಪಕ್ಷ ಗೆದ್ದಿತ್ತು.






