
ಉಳ್ಳಾಲ: ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ವಿಶ್ವ ಹಿಂದೂ ಪರಿಷತ್ ಕುತ್ತಾರು ದೆಕ್ಕಾಡಿನ ಕೊರಗಜ್ಜ ಕ್ಷೇತ್ರದಲ್ಲಿ ನಡೆದ ಪಾದಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ಲವ್ ಜಿಹಾದ್ ನಂತಹ ವಿಷಯಗಳಲ್ಲಿ ಪ್ರತಿಭಟನೆಯ ಕಾಲ ಮುಗಿದಿದೆ. ನಮ್ಮ ಯುವಕರು ನಮ್ಮಲ್ಲಿ ಹುಡುಗಿಯರು ಸಿಗದಿದ್ದರೆ ಉಳಿದ ಮತಗಳ ಹುಡುಗಿಯರನ್ನು ಪ್ರೀತಿಸಿ ಮದುವೆಯಾಗಬೇಕಾದ ಕಾಲ ಬಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮ್ಮ ಯುವ ಸಮುದಾಯ ಮತಾಂತರ ಆದವರನ್ನು ಘರ್ ವಾಪಸಿ ಮಾಡಬೇಕು. ನಮ್ಮ ಹಿಂದೂ ಯುವಕರು ಸೂಕ್ತ ಹೆಣ್ಣು ಸಿಗದೇ 30 ವರ್ಷ ದಾಟಿದರು ಮದುವೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರು ಬೇರೆ ಸಮಾಜದ ಯುವತಿಯರ ಕಡೆಯೂ ಗಮನಹರಿಸಿ ಪ್ರೀತಿಸಿ ಮದುವೆಯಾಗುವ ಸವಾಲನ್ನು ಸ್ವೀಕರಿಸಲಿ ಎಂದು ಹೇಳಿದ ಅವರು ಲವ್ ಜಿಹಾದ್ ಮೂಲಕ ಹಿಂದೂ ಸಮಾಜದ ಯುವತಿಯರನ್ನು ಅವರು ಪ್ರೀತಿಸುವ ನಾಟಕ ಮಾಡಿ ದುರುಪಯೋಗ ಮಾಡುತ್ತಾರೆ. ಆದರೆ ನಾವು ನಿಜವಾದ ಪ್ರೀತಿ ಮಾಡಿ ಮದುವೆಯಾಗುವ ಸಂಕಲ್ಪ ಮಾಡಬೇಕು ಎಂದು ಹೇಳಿದ್ದಾರೆ.
ಹಿಂದೂ ಸಂತರು ಈ ಕಾರ್ಯಕ್ಕೆ ಬೆಂಬಲ ನೀಡಿ ಘರ್ ವಾಪಸಿ ಮಾಡುತ್ತಾರೆ ಎಂದು ಸಂಘಟನೆಗಳ ಬೆನ್ನು ಬೀಳದೆ ಮುಖಂಡರ ಅನುಮತಿಗೆ ಕಾಯದೆ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಕೊರಗಜ್ಜನ ಸಾನಿಧ್ಯ ಸೇರಿದಂತೆ ದೈವಸ್ಥಾನ, ದೇವಸ್ಥಾನಗಳಿಗೆ ಮತಾಂತರಗೊಂಡವರನ್ನು ಕರೆತಂದು ಘರ್ ವಾಪಸಿಯಂತಹ ಕಾರ್ಯ ಮಾಡಬೇಕು ಎಂದು ಹೇಳಿದರು.



















