
ಹೊಸದಿಲ್ಲಿ: 40 ವರ್ಷಗಳ ಹಿಂದೆ ಶಾಲಾ ಬಾಲಕಿಯೊಬ್ಬಳ ಮೇಲೆ ಟ್ಯೂಷನ್ ಶಿಕ್ಷಕನಿಂದ ನಡೆದ ಲೈಂಗಿಕ ಹಲ್ಲೆಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆರೋಪಿಯ ಶಿಕ್ಷೆಯನ್ನು ದೃಢಪಡಿಸಿ ಅತ್ಯಾಚಾರಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷಿ ಪುರಾವೆಗಳು ತಾಳೆಯಾಗುವುದಾದಲ್ಲಿ ಸಂತ್ರಸ್ತೆಯ ಗುಪ್ತಂಗಕ್ಕೆ ಗಾಯಗಳಾಗದಿದ್ದರೂ ಅದನ್ನು ಅತ್ಯಾಚಾರ ಎಂದು ಪರಿಗಣಿಸಿ ಆರೋಪಿಗೆ ಶಿಕ್ಷೆ ವಿಧಿಸಬಹುದು ಎಂದು ಮಹತ್ವದ ಆದೇಶ ಹೊರಡಿಸಿದೆ.
ಆರೋಪಿಯು ಬಾಲಕಿಯ ಗುಪ್ತಾಂಗಕ್ಕೆ ಯಾವುದೇ ಗಾಯಗಳಾಗದಿರುವ ಕಾರಣ ಅತ್ಯಾಚಾರ ಆರೋಪವನ್ನು ಸಾಬೀತುಪಡಿಸಲಾಗದು, ಅಲ್ಲದೆ ಬಾಲಕಿಯ ತಾಯಿಯು ಚಾರಿತ್ರ್ಯಹೀನ ಮಹಿಳೆಯಾಗಿದ್ದು ಸುಳ್ಳು ಆರೋಪ ಮಾಡುತ್ತಿದ್ದಾಳೆ ಎಂದು ವಾದ ಮಂಡಿಸಿದ್ದನು.
ನ್ಯಾಯಮೂರ್ತಿಗಳಾದ ಸುದೀಪ್ ಮೆಹ್ತಾ ಮತ್ತು ಪ್ರಸನ್ನ ಬಿ ವರಾಳೆ ಅವರನ್ನು ಒಳಗೊಂಡ ಪೀಠವು ಈ ಎರಡು ವಾದಗಳನ್ನು ತಳ್ಳಿ ಹಾಕಿ “ಕೇವಲ ವೈದ್ಯಕೀಯ ಪುರಾವೆಯಲ್ಲಿ ಗಂಭೀರ ಗಾಯದ ಗುರುತುಗಳು ಇಲ್ಲ ಎಂದು ಹೇಳಿದ ಕಾರಣಕ್ಕೆ ಸಂತ್ರಸ್ತೆಯ ವಿಶ್ವಾಸಾರ್ಹ ಪುರಾವೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಪ್ರತಿಯೊಂದು ಪ್ರಕರಣದಲ್ಲಿ ಅತ್ಯಾಚಾರ ಸಂತ್ರಸ್ತೆಯ ಗುಪ್ತಾಂಗಕ್ಕೆ ಗಾಯಗಳಾಗಿರಬೇಕು ಎಂದೇನಿಲ್ಲ. ಆಯಾ ಪ್ರಕರಣಗಳ ಇತರ ಅಂಶಗಳು ಮತ್ತು ಸಂದರ್ಭಗಳಿಗೆ ಅದು ಅನುಸಾರವಾಗಿರುತ್ತದೆ. ಸಂತ್ರಸ್ತೆಯ ಗುಪ್ತಾಂಗಕ್ಕೆ ಗಾಯಗಳಾಗಿಲ್ಲ ಎನ್ನುವುದು ಅಭಿಯೋಜಕರ ವಾದಕ್ಕೆ ಮಾರಕವಾಗುವಂತಿಲ್ಲ ಎನ್ನುವುದನ್ನು ಪುನರುಚ್ಚರಿಸುತ್ತೇವೆ” ಎಂದು ಸ್ಪಷ್ಟನೆ ನೀಡಿದ್ದಾರೆ.



















