
ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಇದೇ ಮೊದಲ ಬಾರಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಜಾತಿ ಆಧಾರಿತ ಮೀಸಲಾತಿ ಜಾರಿಗೊಳಿಸಲಾಗಿದೆ. ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಒಳ ಮೀಸಲಾತಿಯೂ ಅನ್ವಯವಾಗಲಿದೆ.
ಇಲ್ಲಿಯವರೆಗೆ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಅಂಗವಿಕಲರು ಮತ್ತು ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತಿದ್ದು ಆದರೆ 2026-27ನೇ ಶೈಕ್ಷಣಿಕ ಸಾಲಿನಿಂದ ಶೇ.50ರ ಜಾತಿ ಮೀಸಲಾತಿ ಜಾರಿಗೆ ತರಲು ಉನ್ನತ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ಸರ್ಕಾರಿ ಪ್ರಥಮ ದರ್ಜೆ, ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜುಗಳಲ್ಲಿ ಉಳಿಯುವ ಕಾರ್ಯಭಾರದ ಆಧಾರದಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲಾಗುತ್ತದೆ. ಹೊಸ ನಿಯಮದಂತೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ ಅಂತ್ಯದೊಳಗೆ ಕೌನ್ಸೆಲಿಂಗ್ ಪೂರ್ಣಗೊಳಿಸಲು ಇಲಾಖೆ ಸೂಚಿಸಿದೆ. ಈ ನಿಯಮವು ಸರ್ಕಾರಿ ಎಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಿಗೂ ಅನ್ವಯವಾಗಲಿದೆ.
ಜುಲೈ 18ರಂದು ಹೊರಡಿಸಿದ್ದ ಆದೇಶದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಮಾತ್ರ ಮೀಸಲಾತಿ ನೀಡಲಾಗಿತ್ತು. ಹಿಂದುಳಿದ ವರ್ಗಗಳನ್ನು ಹೊರಗಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಇಲಾಖೆ ತಿದ್ದುಪಡಿ ಆದೇಶ ಹೊರಡಿಸಿ, ಅವರಿಗೆ ಸಹ ಮೀಸಲಾತಿ ಕಲ್ಪಿಸಿದೆ.
ಕಳೆದ ವರ್ಷ ಯುಜಿಸಿ ಅರ್ಹತೆ ಹೊಂದಿದವರನ್ನಷ್ಟೇ ನೇಮಕ ಮಾಡಿದ್ದರಿಂದ 5 ಸಾವಿರಕ್ಕೂ ಹೆಚ್ಚು ಮಂದಿ ಅವಕಾಶ ಕಳೆದುಕೊಂಡಿದ್ದರು. ಈ ಬಾರಿ ಯುಜಿಸಿ ಅರ್ಹ ಅಭ್ಯರ್ಥಿಗಳು ಮೀಸಲಾತಿಯ ಲಾಭದೊಂದಿಗೆ ನೇಮಕಾತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದಕ್ಕೂ ನಡುವೆ, ಮಹಿಳಾ ಅಭ್ಯರ್ಥಿಗಳಿಗೆ ಈ ಹಿಂದೆ ನೀಡುತ್ತಿದ್ದ ಆದ್ಯತೆಯನ್ನು ಈ ವರ್ಷ ಕೈಬಿಡಲಾಗಿದೆ. ಹಿಂದಿನಂತೆ ಮಹಿಳೆಯರಿಗೆ ಆದ್ಯತೆ ಅಥವಾ ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕು ಎಂದು ಅತಿಥಿ ಉಪನ್ಯಾಸಕಿ ಗಾಯತ್ರಿ ಆಗ್ರಹಿಸಿದ್ದಾರೆ.


















































