
ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿ ಈ ಕುರಿತು ಸಂಪೂರ್ಣ ತನಿಖೆ ನಡೆಸಲಾಗುವುದು. ಭವಿಷ್ಯದಲ್ಲಿ ಇಂತಹ ಅವಘಡಗಳು ಸಂಭವಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
“ಈ ಘಟನೆ ಅತ್ಯಂತ ನೋವು ತಂದಿದ್ದು, ರಾಜ್ಯಕ್ಕೆ ದೊಡ್ಡ ಆಘಾತವಾಗಿದೆ. ಇದು ಮಹಾರಾಷ್ಟ್ರಕ್ಕೆ ಕರಾಳ ದಿನ. ಅಜಿತ್ ಪವಾರ್ ಅವರು ಆಡಳಿತದಲ್ಲಿ ದೃಢ ಹಿಡಿತ ಹೊಂದಿದ್ದ ನಾಯಕರು. ವಿದ್ಯಾವಂತರಾಗಿದ್ದ ಅವರು ಸ್ಪಷ್ಟವಾದ ನಿಲುವು ಮತ್ತು ಕಠಿಣ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದರು. ನಾನು ಅವರೊಂದಿಗೆ ಸಂಪುಟದಲ್ಲಿ ಕೆಲಸ ಮಾಡಿದ್ದೇನೆ. ನಾವು ಒಟ್ಟಾಗಿ ತಂಡವಾಗಿ ರಾಜ್ಯಕ್ಕಾಗಿ ಶ್ರಮಿಸಿದ್ದೇವೆ” ಎಂದು ಏಕನಾಥ್ ಶಿಂಧೆ ಬೇಸರ ವ್ಯಕ್ತಪಡಿಸಿದರು.



















