
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು, ಶಾಲಾ ಪುನರಾವರ್ತಿತ ವಿದ್ಯಾರ್ಥಿಗಳು, ಖಾಸಗಿ ಮತ್ತು ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ಎಲ್ಲಾ ವಿಷಯಗಳ ಬಾಹ್ಯ ಪರೀಕ್ಷೆ ಮತ್ತು ಆಂತರಿಕ ಪರೀಕ್ಷೆ ಎರಡು ಸೇರಿದಂತೆ ಒಟ್ಟಾರೆ ಶೇ. 33 ಅಂದರೆ 625 ಅಂಕಗಳಿಗೆ ಕನಿಷ್ಠ 206 ಅಂಕಗಳನ್ನು ಗಳಿಸಬೇಕು ಎಂದು ಸುತ್ತೋಲೆ ಹೊರಡಿಸಿದೆ.
ಇತ್ತೀಚಿಗಷ್ಟೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಉತ್ತೀರ್ಣತೆಯ ಅಂಕಗಳನ್ನು ಶೇ. 35 ರಿಂದ ಶೇ. 33ಕ್ಕೆ ಇಳಿಸಿ ಅಧಿಸೂಚನೆ ಹೊರಡಿಸಿದ್ದು ಇದೀಗ ಪರೀಕ್ಷಾ ಮಂಡಳಿಯು ಸುತ್ತೋಲೆ ಹೊರಡಿಸಿದೆ. 2025-26 ನೇ ಸಾಲಿನಿಂದ ಆಂತರಿಕ ಪರೀಕ್ಷೆಯನ್ನು ಒಟ್ಟು 125 ಅಂಕಗಳಿಗೆ ಅಂದರೆ ಪ್ರಥಮ ಭಾಷೆಗೆ 25 ಅಂಕ ಮತ್ತು ಉಳಿದ ಐದು ವಿಷಯಗಳಿಗೆ 20 ಅಂಕಗಳಿಗೆ ನಡೆಸಲಿದ್ದು, ಬಾಹ್ಯ ಪರೀಕ್ಷೆಯನ್ನು 500 ಅಂಕಗಳಿಗೆ ಅಂದರೆ ಪ್ರಥಮ ಭಾಷೆಗೆ 100 ಅಂಕ ಮತ್ತು ಉಳಿದ ವಿಷಯಗಳು 80 ಅಂಕಗಳಿಗೆ ಪರೀಕ್ಷೆ ನಡೆಯಲಿದೆ.



















































