
ಬೆಂಗಳೂರು: ಇತ್ತೀಚೆಗೆ ವಿವಿಧ ಕನ್ನಡ ಪರ ಸಂಘಟನೆಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಬಾರದು ಮತ್ತು ಅಂಕ ಪಟ್ಟಿಯಿಂದ ಹೊರಗಿಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದು ಇದರ ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ಅಂಕಗಳನ್ನು ಒಟ್ಟು ಫಲಿತಾಂಶದಿಂದ ಹೊರಗಿಡಲು ರಾಜ್ಯ ಸರ್ಕಾರ ನಿರ್ಧರಿಸಿ ಒಟ್ಟು ಅಂಕಗಳನ್ನು 625ರಿಂದ 525ಕ್ಕೆ ಇಳಿಸಲಾಗಿದೆ.
ಇನ್ನು ಮುಂದೆ ಹಿಂದಿ ಸೇರಿದಂತೆ ತೃತೀಯ ಭಾಷೆಗಳಾದ ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಮತ್ತು ಮರಾಠಿ ಅಂಕಗಳನ್ನು ಗ್ರೇಡ್ ರೂಪದಲ್ಲಿ ನೀಡಲಾಗುತ್ತದೆ. ಆದರೆ ಆ ವಿಷಯದ ಪರೀಕ್ಷೆಯನ್ನು ಬರೆಯುವುದು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿರುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಹೊಸ ಶೈಕ್ಷಣಿಕ ವರ್ಷದಿಂದಲೇ ಈ ನಿಯಮ ಜಾರಿಗೆ ಬರಲಿದ್ದು, ವಿದ್ಯಾರ್ಥಿಗಳ ಒತ್ತಡ ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಫಲಿತಾಂಶದಲ್ಲಿ ತೃತೀಯ ಭಾಷೆಗೆ ಎ, ಬಿ, ಸಿ, ಡಿ ಗ್ರೇಡ್ ನೀಡಲಾಗುತ್ತದೆ.
ಇದರ ಜೊತೆಗೆ, ಮಹಾವೀರ ಜಯಂತಿ ಹಿನ್ನೆಲೆ ಮಾ.30ರಂದು ನಡೆಯಬೇಕಿದ್ದ ಹಿಂದಿ ಪರೀಕ್ಷೆಯನ್ನು ಮಾ.31ಕ್ಕೆ ಮುಂದೂಡಲಾಗಿದೆ.






















































