
ನವದೆಹಲಿ: ಇಂದು ಸಂಸದ ಡಾ.ಸಿ.ಎನ್ ಮಂಜುನಾಥ್ ಅವರು ನವದೆಹಲಿಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ ದೇಶದಲ್ಲಿ 2025ರ ವೇಳೆಗೆ ಸುಮಾರು 1.5 ಲಕ್ಷ ತೋಟಗಾರಿಕಾ ಪದವಿಧರರ ಅವಶ್ಯಕತೆಯಿದ್ದು, ಪ್ರಸ್ತುತ 57 ತೋಟಗಾರಿಕಾ ಕಾಲೇಜುಗಳಲ್ಲಿ 10 ಸಾವಿರಕ್ಕೂ ಕಡಿಮೆ ಪದವಿಧರರು ಹೊರಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ, ರೈತರಿಗೆ, ಮಾರಾಟಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ICAR-IIHR ಅನ್ನು ಡೀಮ್ಡ್ ವಿಶ್ವವಿದ್ಯಾಲಯವನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಭಾರತೀಯ ತೋಟಗಾರಿಕೆ ಸಂಶೋಧನಾ (ICAR-IIHR) ಸಂಸ್ಥೆಯು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತೋಟಕಾರಿಕಾ ವಲಯದಲ್ಲಿ ಅಧಿಕ ಇಳುವರಿ ನೀಡುವ ಬೆಳೆಗಳು, ಹೆಚ್ಚು ರೋಗ ನಿರೋಧಕ ಶಕ್ತಿ ಇರುವ ಬೆಳೆಗಳ ಸಂಶೋಧನೆ, ಹೊಸ ತಂತ್ರಜ್ಞಾನಗಳ ಆವಿಷ್ಕಾರ ಮೂಲಕ ರೈತರ ಆರ್ಥಿಕ ಪ್ರಗತಿಗೆ ಸಹಕರಿಸುತ್ತಿದೆ ಎಂದು ತಿಳಿಸಿದ ಡಾ. ಸಿ.ಎನ್ ಮಂಜುನಾಥ್ ರಾಮನಗರ ಜಿಲ್ಲೆಯಾದ್ಯಂತ ಮಾವು ಹಾಗೂ ತೆಂಗು ಬೆಳೆ 90% ರಷ್ಟು ಹಾನಿಯಾಗಿದ್ದು, 50,000ಕ್ಕೂ ಅಧಿಕ ರೈತರು ನಷ್ಟ ಅನುಭವಿಸಿದ್ದಾರೆ. ಮಾವು ಬೆಳೆಗೆ 57.67 ಕೋಟಿ ರೂ. ಹಾಗೂ ತೆಂಗು ಬೆಳೆಗೆ 30.65 ಕೋಟಿ ಹಣದ ನೆರವನ್ನು ಎನ್‌ಡಿಆರ್‌ಎಫ್ (NDRF) ಅಡಿಯಲ್ಲಿ ಕಲ್ಪಿಸುವ ಮೂಲಕ ನಮ್ಮ ರೈತರ ಸಂಕಷ್ಟಕ್ಕೆ ಸ್ಪಂದಿಸುವಂತೆಯೂ ಕೋರಿದ್ದಾರೆ.



















































