
ಬೆಂಗಳೂರು: ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಹೆಚ್ಚಾಗುವ ಸಾಧ್ಯತೆ ಎದುರಾಗಿದೆ. ರಾಜ್ಯ ಸರ್ಕಾರ EVಗಳಿಗೆ ನೀಡಲಾಗುತ್ತಿದ್ದ 100% ರಸ್ತೆ ತೆರಿಗೆ ವಿನಾಯಿತಿಯನ್ನು ರದ್ದುಪಡಿಸಿ, ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ತರುವ ನಿರ್ಧಾರ ಕೈಗೊಂಡಿದೆ.
‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ (ತಿದ್ದುಪಡಿ) ವಿಧೇಯಕ, 2026’ ಪ್ರಕಾರ, ವಾಹನದ ಬೆಲೆಯ ಆಧಾರದ ಮೇಲೆ ಜೀವಿತಾವಧಿ ತೆರಿಗೆ ವಿಧಿಸಲಾಗುತ್ತದೆ. 10 ಲಕ್ಷ ರೂ.ವರೆಗಿನ ವಾಹನಗಳಿಗೆ 5%, 10–25 ಲಕ್ಷ ರೂ.ವರೆಗೆ 8% ಮತ್ತು 25 ಲಕ್ಷ ರೂ. ಮೇಲ್ಪಟ್ಟ ವಾಹನಗಳಿಗೆ 10% ತೆರಿಗೆ ವಿಧಿಸಲಾಗುತ್ತದೆ.
2016ರಿಂದ EVಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲಾಗುತ್ತಿತ್ತು. ಆದರೆ ಈಗ ಎಲ್ಲಾ ದರದ EVಗಳಿಗೆ ತೆರಿಗೆ ಅನ್ವಯವಾಗಲಿದೆ. EV ಮಾರಾಟವು ಸ್ಥಿರ ಹಂತ ತಲುಪಿರುವುದರಿಂದ ವಿನಾಯಿತಿ ಮುಂದುವರಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಖಾಸಗಿ ಬಸ್ ಮಾಲೀಕರಿಗೆ ತೆರಿಗೆ ಇಳಿಕೆ ಘೋಷಿಸಲಾಗಿದೆ. ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಗಳಿಗೆ ಪ್ರತಿ ಸೀಟಿಗೆ 3,500 ರೂ.ಯಿಂದ 2,500 ರೂ.ಗೆ ಹಾಗೂ ಸ್ಲೀಪರ್ ಕೋಚ್ಗಳಿಗೆ 4,000 ರೂ.ಯಿಂದ 3,000 ರೂ.ಗೆ ತೆರಿಗೆ ಕಡಿತಗೊಳಿಸಲಾಗಿದೆ. ಈ ಕ್ರಮವನ್ನು ಟ್ರಾವೆಲ್ಸ್ ಸಂಘ ಸ್ವಾಗತಿಸಿದೆ.






















































