
ಬೆಂಗಳೂರು: ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ರಾಜಾತೀಥ್ಯ ಸ್ವೀಕರಿಸಿದ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಅನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಕಾರಾಗೃಹ ಇಲಾಖೆಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.
ಕಮಿಷನರ್ ದಯಾನಂದ ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದು, ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಕೆಲವೊಂದು ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ದರ್ಶನ್ ಸೇರಿ ಇಡೀ ಗ್ಯಾಂಗ್ ಅನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಕಾರಾಗೃಹ ಇಲಾಖೆಗೆ ಪತ್ರ ಬರೆಯಲಾಗಿದೆ.
ಈ ಹಿಂದೆಯೂ ದರ್ಶನ್ ಗ್ಯಾಂಗ್ ಕೆಲ ಸೌಲಭ್ಯಗಳನ್ನು ಪಡೆದುಕೊಂಡಿರುವ ಕುರಿತು ಆರೋಪಗಳು ಕೇಳಿ ಬಂದಿದ್ದು ಹೀಗಾಗಿ ಶನಿವಾರವಷ್ಟೇ ಸಿಸಿಬಿ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಕಾರಾಗೃದಲ್ಲಿ ಮೊಬೈಲ್ ಅಥವಾ ಇತರೆ ವಸ್ತುಗಳು ಕಂಡು ಬಂದಿರಲಿಲ್ಲ. ಇದೀಗ ದರ್ಶನ್ ಕೆಲವೊಂದು ಸೌಲಭ್ಯಗಳು ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಸೌಲಭ್ಯಗಳು ಇಲ್ಲದ ಕಡೆ ಸ್ಥಳಾಂತರ ಮಾಡುವಂತೆ ಕೋರಲಾಗಿದೆ. ಏಕೆಂದರೆ, ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪ ಪಟ್ಟಿ ಇನ್ನು ಸಲ್ಲಿಕೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ಇಂತಹ ಘಟನೆಗಳಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.













