
ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು 2021ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರಿಗೆ ಹಲವು ಕಠಿಣ ಷರತ್ತುಗಳನ್ನು ವಿಧಿಸಿದ್ದು ಇದೀಗ ತನ್ನ ನಿಯಂತ್ರಣವನ್ನು ಮತ್ತಷ್ಟು ಹೆಚ್ಚಿಸಿ 35 ವಿಧಿಗಳನ್ನು ಒಳಗೊಂಡಿರುವ 114 ಪುಟಗಳ ಕಾನೂನಿಗೆ ತಾಲಿಬಾನ್ನ ಸರ್ವೋಚ್ಛ ನಾಯಕ ಹಿಬಾತುಲ್ಲಾ ಅಖುಂಡ್ಜಾದಾ ಅನುಮೋದನೆ ನೀಡಿದ್ದಾರೆ.
ಮಹಿಳೆಯರು ಸಾರ್ವಜನಿಕವಾಗಿ ಮುಖ ತೋರಿಸಬಾರದು, ತೆಳು, ಬಿಗಿ, ಚಿಕ್ಕದಾಗಿರಬಾರುವ ಬಟ್ಟೆ ಧರಿಸಬಾರದು ಸೇರಿದಂತೆ ಹಲವು ನಿಯಮ ಸೇರಿದ್ದು ಇದೀಗ ಮಹಿಳೆಯರು ಸಾರ್ವಜನಿಕವಾಗಿ ಹಾಡುವುದು, ಪಠಣೆ ಮಾಡುವುದು, ಗಟ್ಟಿಯಾಗಿ ಓದುವುದನ್ನೂ ನಿಷೇಧಿಸಿದೆ. ರಕ್ತಸಂಬಂಧಿ, ಪತಿ ಬಿಟ್ಟು ಬೇರೆ ಗಂಡಸರನ್ನು ನೋಡಬಾರದು. ಸಂಗೀತ ನುಡಿಸಬಾರದು, ಸಾರ್ವಜನಿಕವಾಗಿ ಪುರುಷರ ಜೊತೆ ಸೇರಬಾರದು ಎಂದು ಸೂಚಿಸಲಾಗಿದೆ.
ಸರ್ವೋಚ್ಛ ನಾಯಕನ ಅನುಮೋದನೆ ಸಿಕ್ಕ ಬಳಿಕ, ಬುಧವಾರ ಸರ್ಕಾರದ ಪರ ವಕ್ತಾರರು ಇದನ್ನು ಪ್ರಕಟಿಸಿದ್ದು “ಇನ್ಶಾ ಅಲ್ಲಾಹ್, ಈ ಇಸ್ಲಾಮಿಕ್ ಕಾನೂನು ಸದ್ಗುಣವನ್ನು ಉತ್ತೇಜಿಸಲು ಮತ್ತು ದುರ್ಗುಣಗಳನ್ನು ತೊಡೆದುಹಾಕಲು ಹೆಚ್ಚು ಸಹಾಯ ಮಾಡುತ್ತದೆ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ” ಎಂದು ಸಚಿವಾಲಯದ ವಕ್ತಾರ ಮೌಲ್ವಿ ಅಬ್ದುಲ್ ಗಫರ್ ಫಾರೂಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.













