
ನವದೆಹಲಿ: ಇತ್ತೀಚಿಗೆ ಕೋಲ್ಕತ್ತಾದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿನಿಯ ರೇಪ್ & ಮರ್ಡರ್ ಕೇಸ್ ಹಾಗೂ ಆ ಬಳಿಕ ಕಾಲೇಜಿನ ಬಳಿ ನಡೆದ ಪ್ರತಿಭಟನೆ ಹೆಸರಿನ ಸಾಕ್ಷ್ಯ ನಾಶದ ಯತ್ನದ ಬಗ್ಗೆ ಕೋಲ್ಕತ್ತಾ ಹೈಕೋರ್ಟ್ ಕಿಡಿಕಾರಿದ್ದು, ರಾಜ್ಯ ಸರ್ಕಾರ ಏನು ಮಾಡುತ್ತಿದೆ. ಸ್ಥಳದಲ್ಲಿ ಪೊಲೀಸ್ ಇದ್ದರೂ, ದುಷ್ಕರ್ಮಿಗಳನ್ನ ತಡೆಯಲು ಆಗಲಿಲ್ಲವೇ, ಈ ದುಷ್ಕೃತ್ಯದಿಂದ ವೈದ್ಯರು ನಿರ್ಭಯವಾಗಿ ಹೇಗೆ ಕೆಲಸ ಮಾಡ್ತಾರೆ? ನೀವು ಯಾವ ಕಾರಣಕ್ಕಾಗಿ CrPC ಆದೇಶ ಸೆಕ್ಷನ್ 144 ಹಾಕುತ್ತೀರಿ. ಗಲಾಟೆ ನಡೆಯುತ್ತಿರುವಾಗ ನೀವು ಆ ಪ್ರದೇಶವನ್ನ ಸುತ್ತುವರಿದಿರಬೇಕು. ಪೊಲೀಸರ ಪ್ರಕಾರ 40 ಜನ ಮುಖವಾಡ ಧರಿಸಿ ಆಸ್ಪತ್ರೆಗೆ ನುಗ್ಗಿದ್ದಾರೆ. ಆಸ್ಪತ್ರೆಯ ಆವರಣಕ್ಕೆ 7 ಸಾವಿರ ಜನರು ನುಗ್ಗಲು ಸಾಧ್ಯವಿಲ್ಲ ಅಲ್ಲವೇ… ಆಸ್ಪತ್ರೆ, ಸುತ್ತಮುತ್ತಲಿನ ಹಲವಾರು ಸಿಸಿಟಿವಿ ಕ್ಯಾಮೆರಾ ನಾಶವಾಗಿದೆ ನಿಮ್ಮಿಂದ ಆಸ್ಪತ್ರೆ ನಡೆಸಲು ಸಾಧ್ಯವಾದ್ರೆ ಮಾತ್ರ ನಡೆಸಿ, ಇಲ್ಲವೇ ಮುಚ್ಚಿ ಎಂದು ಹೈಕೋರ್ಟ್ ಚಾಟಿ ಬೀಸಿದೆ.
ಕೇಸ್‌ನಲ್ಲಿ ಸಿಬಿಐ ತನಿಖೆ ತೀವ್ರವಾಗಿದ್ದು ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್‌ರನ್ನು ಸಿಬಿಐ ವಶಕ್ಕೆ ಪಡೆದಿದೆ. ಇದರೊಂದಿಗೆ ಆರ್‌ಜಿ ಕರ್ ಆಸ್ಪತ್ರೆ 9 ವೈದ್ಯರಿಗೆ ಸಿಬಿಐ ನೋಟಿಸ್ ನೀಡಿದ್ದು ಎದೆ ವಿಭಾಗದ ಮುಖ್ಯಸ್ಥ ಡಾ.ಅರುಣ್ ದತ್ತಾ ಅವರನ್ನೂ ವಿಚಾರಿಸಲಾಗಿದೆ. ಆರ್‌ಜಿ ಕರ್ ಆಸ್ಪತ್ರೆ ವೈದ್ಯರಿಂದ ಸಿಬಿಐ ಟೀಮ್ ಹಲವು ಮಾಹಿತಿಯನ್ನು ಕಲೆಹಾಕಿದೆ.
ಈ ಮಧ್ಯೆ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಆರೋಪಿಗೆ ಮರಣದಂಡನೆ ವಿಧಿಸುವಂತೆ ಬೃಹತ್ ಮೆರವಣಿಗೆ ಮಾಡಿದ್ದಾರೆ. ಸಿಎಂ ಮಮತಾ ಮೆರವಣಿಗೆಯಲ್ಲಿ ಟಿಎಂಸಿ ಮಹಿಳಾ ಕಾರ್ಯಕರ್ತರು ಭಾಗಿಯಾಗಿದ್ದು ಇನ್ನೊಂದೆಡೆ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಲೇಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಅತ್ಯಾಚಾರ ಪ್ರಕರಣ ಮುಚ್ಚಿ ಹಾಕಲು ಮಮತಾ ಯತ್ನ ಮಾಡುತ್ತಿದ್ದಾರೆ. ‘ಅತ್ಯಾಚಾರ ಆರೋಪಿಗಳನ್ನ ರಕ್ಷಿಸೋದು ಹೀನ ಕೃತ್ಯ’ ಎಂದು ಬಿಜೆಪಿ ಆಕ್ರೋಶ ಹೊರಹಾಕಿದೆ.













