
ಕಾರವಾರ:ಉತ್ತರಕನ್ನಡದ ಶಿರೂರಿನಲ್ಲಿ ಜುಲೈ 16 ರಂದು ಸಂಭವಿಸಿದ ಭೂಕುಸಿತದಲ್ಲಿ ಲಾರಿ ಸಮೇತ ಚಾಲಕ ಅರ್ಜುನ್ ಸೇರಿದಂತೆ ಮೂವರು ನಾಪತ್ತೆಯಾಗಿ ಇಂದಿಗೆ ಹನ್ನೊಂದು ದಿನಗಳು ಕಳೆದರೂ ಇನ್ನೂ ಪತ್ತೆಯಾಗಿಲ್ಲ. ಹುಡುಕಾಟ ಮುಂದುವರೆದಿದ್ದು ಅದರಂತೆ ಇಂದು ಮಲ್ಪೆ ಈಶ್ವರ್ ತಂಡ ಶಿರೂರಿಗೆ ಬಂದು ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಈಶ್ವರ್ ಮಲ್ಪೆ ಉತ್ತರಕನ್ನಡ ಎಸ್ಪಿ, ಡಿಎಸ್ಪಿ ಅವರು ಶುಕ್ರವಾರ ಕರೆ ಮಾಡಿ ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವ ಲಾರಿ ಹಾಗೂ ಚಾಲಕನ ಪತ್ತೆ ಕಾರ್ಯಾಚರಣೆ ನಡೆಸುವಂತೆ ತಿಳಿಸಿದ್ದು ಈ ನಿಟ್ಟಿನಲ್ಲಿ ಶನಿವಾರ ಮುಂಜಾನೆ ನಮ್ಮ ತಂಡ ಶಿರೂರಿಗೆ ಬಂದು ಕಾರ್ಯಾಚರಣೆ ಆರಂಭಿಸಿದ್ದೇವೆ. ಆದರೆ ಗಂಗಾವಳಿ ನದಿಯಲ್ಲಿ ನೀರಿನ ಸೆಳೆತ ಹೆಚ್ಚಾಗಿರುವುದರಿಂದ ನೀರಿನಾಳಕ್ಕೆ ಹೋಗಿ ಹುಡುಕಾಟ ನಡೆಸುವುದು ಸವಾಲಿನ ಕೆಲಸ. ಅಲ್ಲದೆ ಭೂ ಕುಸಿತದ ಸಂದರ್ಭ ಮನೆಯ ಅವಶೇಷಗಳು ನದಿಗೆ ಬಿದ್ದಿರುವುದರಿಂದ ನೀರಿನಾಳದಲ್ಲಿ ಕಬ್ಬಿಣದ ಶೀಟ್ ಗಳು ಜೊತೆಗೆ ಕೆಸರು ಮಿಶ್ರಿತ ನೀರು ಹರಿಯುವುದರಿಂದ ನೀರಿನಾಳದಲ್ಲಿರುವ ವಸ್ತುಗಳು ಕಣ್ಣಿಗೆ ಗೋಚರವಾಗುವುದಿಲ್ಲ. ಬರಿ ಸ್ಪರ್ಶ ಜ್ಞಾನದಿಂದ ಯಾವ ವಸ್ತು ಎಂದು ಕಂಡುಹಿಡಿಯಬೇಕು ಹಾಗಾಗಿ ತುಂಬಾ ಸವಾಲಿನ ಕೆಲಸ ಎಂದು ತಿಳಿಸಿದ್ದಾರೆ.
ಸ್ಥಳದಲ್ಲಿ ಈಗಾಗಲೇ ಸೇನಾ ಪಡೆ, ಎನ್.ಡಿ.ಆರ್.ಎಫ್. ತಂಡ ಕಾರ್ಯಾಚರಣೆ ನಡೆಸಿದ್ದು ಅವರ ಮಾರ್ಗದರ್ಶನ ಪಡೆದು ನಾವು ಕಾರ್ಯಾಚರಣೆ ನಡೆಸುತ್ತೇವೆ. ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೆ ನಾವು ಇಲ್ಲಿಯೇ ಇರುತ್ತೇವೆ ಎಂದು ತಿಳಿಸಿದ್ದಾರೆ.











