
ಮುಂಬೈ: ಮಹಾರಾಷ್ಟ್ರದ ರಾಯಗಡದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಅನ್ವಿ ಕಾಮ್ದಾರ್ (26) ಎಂಬವರು ಆಕಸ್ಮಿಕವಾಗಿ ಜಲಪಾತಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಈಕೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿದ್ದು ಜುಲೈ 16 ರಂದು ತನ್ನ ಏಳು ಸ್ನೇಹಿತರೊಂದಿಗೆ ರಾಯಗಡ ಬಳಿಯ ಕುಂಭೆ ಫಾಲ್ಸ್ ಬಳಿ ಜಲಪಾತಕ್ಕೆ ರೀಲ್ ಚಿತ್ರೀಕರಣಕ್ಕೆ ತೆರಳಿದ್ದು, ಬೆಳಗ್ಗೆ 10.30ರ ಸುಮಾರಿಗೆ ಏಕಾಏಕಿ ಭೂಕುಸಿದಿದ್ದು, ಯುವತಿ 300 ಅಡಿ ಆಳದ ಜಲಪಾತಕ್ಕೆ ಬಿದ್ದಿದ್ದಾಳೆ. ಸ್ಥಳೀಯ ಅಧಿಕಾರಿಗಳು ತಕ್ಷಣ ಸ್ಪಂದಿಸಿ ರಕ್ಷಣಾ ತಂಡದೊಂದಿಗೆ ಸ್ಥಳಕ್ಕೆ ತಲುಪಿದ್ದಾರೆ.
ಕೋಸ್ಟ್ ಗಾರ್ಡ್ ಮತ್ತು ಮಹಾರಾಷ್ಟ್ರ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯ ಸಿಬ್ಬಂದಿಗಳು ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಯುವತಿ ಸುಮಾರು 300-350 ಅಡಿ ಕಣಿವೆಯಲ್ಲಿ ಬಿದ್ದಿದ್ದು, ಗಂಭೀರ ಗಾಯಗಳಾಗಿದ್ದು ಅದೇ ಸಮಯಕ್ಕೆ ಜೋರು ಮಳೆ ಸುರಿಯುತ್ತಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಮೇಲೆತ್ತುವುದು ಸಾಧ್ಯವಾಗಲಿಲ್ಲ. ಸತತ ಆರು ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆಯ ಬಳಿಕ ಅನ್ವಿಯನ್ನು ಸುರಕ್ಷಿತವಾಗಿ ಹೊರತಂದು ಆಕೆಯನ್ನು ಮಂಗಾವ್ ಉಪ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅನ್ವಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.








