ಭಾವಕ್ಕೆ ಜೀವ ತುಂಬಿದಷ್ಟು ನಾವು ನಾವಾಗಿರುತ್ತೇವೆ… ನಮ್ಮವರು ನಮ್ಮವರಾಗುತ್ತಾರೆ

ಸಂಬಂಧ ಅನ್ನೋದು ಮೂರು ಅಕ್ಷರದ ಪದವಲ್ಲ,ಅದರೊಳಗೆ ಬೆರೆತು ಆ ಸಂಭ್ರಮದಲ್ಲಿ ಮಿಂದೆದ್ದವರಿಗೆ ಅದೊಂದು ಅದ್ಭುತ ಪ್ರಪಂಚ.ಹಿಂದೆ ಎಲ್ಲಾ ಮನೆಗಳಲ್ಲೂ ಅವಿಭಕ್ತ ಕುಟುಂಬವನ್ನು ಕಾಣ್ತಾ ಇದ್ದೆವು,ಆದ್ರೆ ಈಗಿನ ಕಾಲಕ್ಕೆ ಅಂತಹ ಕುಟುಂಬಗಳು ಕಾಣಸಿಗೋದು ತುಂಬಾನೇ ಅಪರೂಪ.
ಸಂಬಂಧಗಳ ಸಂಕೋಲೆಗಳು ಕಡಿದು ಆ ಬಾಂಧವ್ಯದ ಪ್ರಪಂಚದಿಂದ ತುಂಬಾನೇ ದೂರ ಉಳಿದು ಬಿಡುತ್ತೇವೆ.ಅಂಚೆಕಾರ್ಡಿನಲ್ಲಿ ಸಂಬಂಧಿಕರೊಬ್ಬರ ಆತ್ಮೀಯತೆಯ ಅಕ್ಷರಗಳಿಗೆ ಕಾದು ಕುಳಿತುಕೊಳ್ಳುವ ಕಾಲವೊಂದಿತ್ತು,ದೂರದ ಮನೆಯಲ್ಲಿ ಒಂದೇ ಪೋನ್ ಇರುವಾಗ ಸಂಬಂಧಿಕರೊಬ್ಬರ ಕರೆ ಆ ಪೋನ್‌ಗೆ ಬರುವಾಗ ಓಡಿ ಹೋಗಿ ಮಾತಾಡುವಾಗ ಇದ್ದ ಆತ್ಮೀಯತೆಯ ಸಂತೃಪ್ತಿ ಈಗ ಕೈಯಲ್ಲಿ ಎರಡೆರಡು ಮೊಬೈಲ್ಗಳಿದ್ದರೂ ಇರಲ್ಲ ಅಲ್ಲವೇ..?.ಕಾರು ಬೈಕುಗಳು ವಿರಳವಾಗಿದ್ದ ಆ ದಿನಗಳು ಸಂಬಂಧದ ಸಂಕೇತವನ್ನು ಗಟ್ಟಿಗೊಳಿಸಿತ್ತೋ ಏನೋ ಮನೆಗೆ ಬಂದ ಸಂಬಂಧಿಕರನ್ನು ಒಂದೆರಡು ದಿನ ಮನೆಯಲ್ಲೇ ಉಳಿದುಕೊಳ್ಳುವಂತೆ ಮಾಡುತ್ತಿತ್ತು,ಆದರೆ ಈಗ ಸಂಬಂಧಗಳು ಕಣ್ಣಿಗೆ ಹತ್ತಿರವಾದರೂ ಭಾವನೆಗಳಿಂದ ದೂರ ಉಳಿಯುತ್ತಿವೆ.ಅಂದು ರಜೆ ಬಂತೆಂದರೆ ಸಾಕು ಅಜ್ಜಿ ಮನೆಗೆ ಓಡೋಡಿ ಬರುವ ತವಕ,ಅಲ್ಲೊಂದಷ್ಟು ಸಂಭ್ರಮ,ಈಗಿನ ಮಕ್ಕಳಿಗೆ ಆ ಸಂಭ್ರಮವೆಲ್ಲಿ.ಇಂಟರ್ನೆಟ್ ಯುಗದಲ್ಲಿ ಜಗವೇ ಹತ್ತಿರವಾಗಿದೆ,ಆದರೆ ಹತ್ತಿರವಿದ್ದ ಸಂಬಂಧಗಳೇಕೊ ದೂರವಾಗುತ್ತಿದೆಯೋ ಎಂದು ಹೀಗೊಮ್ಮೆ ಆಗೊಮ್ಮೆ ಅನಿಸುವುದೂ ಉಂಟು.ಅಂಚೆಕಾರ್ಡಿನಲ್ಲಿ ಅಕ್ಷರಗಳಾಗಿದ್ದ ಆ ದಿನದ ಭಾವನೆಗಳು ಎಷ್ಟು ದಿನಗಳಾದರೂ ಜೀವಂತಿಕೆಯನ್ನು ಇಟ್ಟುಕೊಳ್ಳುತ್ತಿತ್ತು,ಆದರೆ ಕ್ಷಣದೊಳಗೆ ಬಂದು ಹೋಗುವ ಈಗಿನ ಸಂದೇಶಗಳು ಆ ಕ್ಷಣಕ್ಕಷ್ಟೇ ಜೀವವಿರುತ್ತೆ.ಬದಲಾವಣೆಯ ಜಗದೊಳಗೆ ಸಂಬಂಧಗಳ ಜೊತೆಯೇ ಸಾಗೋಣ,ಭಾವನೆಗಳ ಲೋಕದೊಳಗೆ ನಮ್ಮವರ ಜೊತೆಗೆ ಒಂದಷ್ಟು ಸಮಯವನ್ನು ಕಳೆಯೋಣ,ಇದು ತಾಯಿ,ತಂದೆ,ಅಕ್ಕ, ತಮ್ಮ,ಹೆಂಡತಿ,ಗಂಡ,ದೊಡ್ಡಪ್ಪ,ಚಿಕ್ಕಪ್ಪ,ಅಜ್ಜ, ಅಜ್ಜಿ,ಮಾವ, ಅತ್ತೆ ,ಭಾವ,ಅತ್ತಿಗೆ ,ಚಿಕ್ಕಮ್ಮ, ದೊಡ್ಡಮ್ಮ ಈಗೇ ಭಾವನೆಗೆ ಜೀವ ಕೊಡುವ ಸಂಬಂಧದ ಒಂದೊಂದು ಮುಖಗಳು,ಈ ಭಾವಕ್ಕೆ ಜೀವತುಂಬಿದಷ್ಟು ನಾವು ನಾವಾಗಿರುತ್ತೇವೆ,ನಮ್ಮವರು ನಮ್ಮವರಾಗಿರುತ್ತಾರೆ.
ಚೇತನ್.ವರ್ಕಾಡಿ..





