
ಉತ್ತರಪ್ರದೇಶ: ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಹುಟ್ಟುಹಬ್ಬ ಕಾರ್ಯಕ್ರಮ ಮುಗಿಸಿ ಮನೆಗೆ ವಾಪಸ್ಸಾಗುವ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯೂಟ್ಯೂಬರ್ ಗಳು ಮೃತಪಟ್ಟ ದುರ್ಘಟನೆ ಸಂಭವಿಸಿದೆ.ರೌಂಡ್ 2 ವರ್ಲ್ಡ್ ಚಾನೆಲ್ ನಲ್ಲಿ ಹಾಸ್ಯ ವಿಷಯವನ್ನು ರಚಿಸುತಿದ್ದ ನಾಲ್ವರು ಯುವಕರು ಯೂಟ್ಯೂಬರ್ಗಳಾಗಿದ್ದು ಹುಟ್ಟುಹಬ್ಬದ ಸಂಭ್ರಮಾಚರಣೆ ಮುಗಿಸಿ ಕಾರಿನಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಎದುರುಗಡೆಯಿಂದ ಬರುತ್ತಿದ್ದ ಬೊಲೆರೊ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ಕಾರಿನಲ್ಲಿದ್ದವರು ಗಾಯಗೊಂಡಿದ್ದು ಕೂಡಲೇ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಹಾಗೂ ಸ್ಥಳೀಯರ ಸಹಕಾರದಿಂದ ಕಾರಿನಲ್ಲಿದ್ದವರನ್ನು ಸಿಎಚ್‌ಸಿ ಗಜರೌಲಾ ಆಸ್ಪತ್ರೆಗೆ ಕರೆದೊಯ್ದಿದ್ದು ಈ ವೇಳೆ ಪರಿಶೀಲಿಸಿದ ವೈದ್ಯರು ನಾಲ್ವರು ಯುವಕರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಅಪಘಾತದಲ್ಲಿ ಕೆಲವು ಮಂದಿ ಗಾಯಗೊಂಡಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಈ ಕುರಿತು ಮಾಹಿತಿ ನೀಡಿದ ಪೊಲೀಸರು ಮೃತರನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ಗಾಯಾಳುಗಳನ್ನು ಅಮ್ರೋಹಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿಸಿದ್ದಾರೆ.





















































































