ಸಿಎಂ ಸೂಚನೆ ನೀಡಿ 20 ದಿನಗಳ ಬಳಿಕ ಮೊಸರು ದರ ಇಳಿಸಿದ ಕೆಎಂಎಫ್

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೊಸರಿನ ದರವನ್ನು ಕನಿಷ್ಠ 2 ರೂಪಾಯಿ ಕಡಿತಗೊಳಿಸುವಂತೆ ಸೂಚನೆ ನೀಡಿ 20 ದಿನಗಳ ಬಳಿಕ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ದರ ಇಳಿಕೆಗೆ ಮುಂದಾಗಿದೆ. ಸಾರ್ವಜನಿಕರ ಆಕ್ರೋಶದ ಬೆನ್ನಲ್ಲೇ ಪ್ರತಿ ಕೆ.ಜಿ. ಮೊಸರಿಗೆ 2 ರೂಪಾಯಿ ಹಾಗೂ 500 ಗ್ರಾಂ ಪ್ಯಾಕ್‌ಗೆ 1 ರೂಪಾಯಿ ಕಡಿತಗೊಳಿಸಲಾಗಿದೆ. ಪರಿಷ್ಕೃತ ದರ ನವೆಂಬರ್ 29ರಿಂದ ಜಾರಿಗೆ ಬರಲಿದೆ.
ಇತ್ತೀಚೆಗೆ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಏಕಾಏಕಿ ಹೆಚ್ಚಿಸಿದ್ದರಿಂದ ಗ್ರಾಹಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮೊಸರಿನ ದರದಲ್ಲಿ ಕನಿಷ್ಠ 2 ರೂಪಾಯಿ ಇಳಿಕೆ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ, 20 ದಿನ ಕಳೆದರೂ ಕೆಎಂಎಫ್ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಕೊಬ್ಬಿನಾಂಶದ ಆಧಾರದ ಮೇಲೆ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8ರಿಂದ 14 ರೂಪಾಯಿವರೆಗೆ ಹೆಚ್ಚಿಸಲಾಗಿತ್ತು. ಇದರೊಂದಿಗೆ ಮೊಸರಿನ ಬೆಲೆಯನ್ನೂ ಪ್ರತಿ ಕೆ.ಜಿ.ಗೆ 14 ರೂಪಾಯಿ ಹಾಗೂ ಅರ್ಧ ಕೆ.ಜಿ. ಪ್ಯಾಕ್‌ಗೆ 6 ರೂಪಾಯಿ ಏರಿಕೆ ಮಾಡಲಾಗಿತ್ತು. ಬೆಲೆ ಏರಿಕೆಯಿಂದ ಅಸಮಾಧಾನಗೊಂಡಿದ್ದ ಗ್ರಾಹಕರು ದರ ಕಡಿತಕ್ಕೆ ಒತ್ತಾಯಿಸಿದ್ದರು.
ಆದರೆ, ಮುಖ್ಯಮಂತ್ರಿಗಳ ಸೂಚನೆಯ ಹೊರತಾಗಿಯೂ ಕ್ರಮ ಕೈಗೊಳ್ಳದ ಕೆಎಂಎಫ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿದ್ದವು. ‘ದೇವರು ವರ ಕೊಟ್ಟರೂ ಪೂಜಾರಿ ಕೊಡುತ್ತಿಲ್ಲ, ಸಿಎಂ ಮಾತಿಗೂ ಬೆಲೆ ಇಲ್ಲವೇ?’ ಎಂಬಂತಹ ಚರ್ಚೆಗಳು ನಡೆದಿದ್ದವು. ಇದೀಗ ಕೆಎಂಎಫ್ ಮೊಸರಿನ ದರ ಇಳಿಸಿದೆ.

























































































