ಸ್ತನ ಕ್ಯಾನ್ಸರ್ ಆರಂಭಿಕ ಪತ್ತೆಗೆ ಎಐ ತಂತ್ರಜ್ಞಾನ: ಎಲ್ಲಾ ಜಿಲ್ಲೆಗಳಿಗೂ ಹೊಸ ಯಂತ್ರ
ಆರೋಗ್ಯ ಸಚಿವ ಯು.ಟಿ. ಖಾದರ್ ಮಾಹಿತಿ

ಮಂಗಳೂರು: ಆರೋಗ್ಯ ಸಚಿವ ಯು.ಟಿ. ಖಾದರ್ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಎಐ ನೆರವಿನ ಸ್ತನ ಕ್ಯಾನ್ಸರ್ ತಪಾಸಣಾ ಯಂತ್ರಗಳನ್ನು ಒದಗಿಸಲಾಗುವುದು. ಈ ಮೂಲಕ ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸದ್ಯ ಕೆಲವೇ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಈ ಅತ್ಯಾಧುನಿಕ ಯಂತ್ರಗಳನ್ನು ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಪ್ರತಿ ಯಂತ್ರಕ್ಕೆ ಸುಮಾರು 30 ಲಕ್ಷ ರೂ. ವೆಚ್ಚವಾಗಲಿದೆ. ಗ್ರಾಮೀಣ ಪ್ರದೇಶಗಳಿಗೂ ಯಂತ್ರ ಸಹಿತ ಕಿಟ್‌ಗಳನ್ನು ಕೊಂಡೊಯ್ದು ತಪಾಸಣೆ ನಡೆಸಲಾಗುವುದು. ರೋಗದ ಲಕ್ಷಣಗಳು ಕಂಡುಬಂದ ಬಿಪಿಎಲ್ ಕುಟುಂಬದವರಿಗೆ ಉಚಿತ ಚಿಕಿತ್ಸೆ ಒದಗಿಸಲಾಗುವುದು. ಮುಂದಿನ ಹಂತದಲ್ಲಿ ಮೊಬೈಲ್ ಮೂಲಕ ಬಾಯಿ ಕ್ಯಾನ್ಸರ್ ಪತ್ತೆ ಮಾಡುವ ಯೋಜನೆಯನ್ನೂ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಕಿಮೋ ಥೆರಪಿ ಡೇ ಕೇರ್ ಸೆಂಟರ್: ಕ್ಯಾನ್ಸರ್ ರೋಗಿಗಳ ಅನುಕೂಲಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮುಂದಿನ ಮೂರು ತಿಂಗಳೊಳಗೆ ಕಿಮೋ ಥೆರಪಿ ಡೇ ಕೇರ್ ಸೆಂಟರ್‌ಗಳನ್ನು ಆರಂಭಿಸಲಾಗುವುದು. ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿಯೂ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ಸಿದ್ಧವಿದೆ ಎಂದರು.
ಪುನೀತ್ ಹೃದಯ ಜ್ಯೋತಿ ರಾಜ್ಯಾದ್ಯಂತ ವಿಸ್ತರಣೆ: ಹೃದಯ ಸಂಬಂಧಿ ಕಾಯಿಲೆಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡುವ ಉದ್ದೇಶದಿಂದ ಪುನೀತ್ ಹೃದಯ ಜ್ಯೋತಿ ಯೋಜನೆಯನ್ನು ರಾಜ್ಯದ 31 ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಈವರೆಗೆ ಯೋಜನೆಯಡಿ 14,94,578 ಇಸಿಜಿ ಪರೀಕ್ಷೆಗಳನ್ನು ನಡೆಸಲಾಗಿದ್ದು, 22,579 ಸ್ಟೆಮಿ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇನ್ನು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಿಗಾಗಿ ರಾಜ್ಯದ 169 ಸರ್ಕಾರಿ ಡಯಾಲಿಸಿಸ್ ಕೇಂದ್ರಗಳಲ್ಲಿ 639 ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ವಾರ್ಷಿಕವಾಗಿ ಸುಮಾರು 5 ಲಕ್ಷ ಡಯಾಲಿಸಿಸ್ ಸೆಷನ್‌ಗಳನ್ನು ನಡೆಸಲಾಗುತ್ತಿದೆ. ರೋಗಿಗಳ ಸುರಕ್ಷತೆ ಹಾಗೂ ಚಿಕಿತ್ಸೆಯ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಸರ್ಕಾರಿ ಕೇಂದ್ರಗಳಲ್ಲಿ ಬಳಸುವ ಡಯಾಲೈಸರ್‌ಗಳನ್ನು ಒಂದೇ ಬಾರಿ ಬಳಸಲು ನಿರ್ಧರಿಸಲಾಗಿದೆ. ಇದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಹಿಮೋಫಿಲಿಯಾ ಕಾಯಿಲೆಯಿಂದ ಬಳಲುವವರಲ್ಲಿ ರಕ್ತಸ್ರಾವ ತಡೆಗಟ್ಟಲು ಪ್ರತಿ ತಿಂಗಳು ಅಗತ್ಯ ಚುಚ್ಚುಮದ್ದು ನೀಡುವ ‘ಕುಸುಮ ಸಂಜೀವಿನಿ’ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಆರೋಗ್ಯ ಶ್ರೀ (ಎಬಿಆರ್‌ಕೆ) ಯೋಜನೆಯಡಿ ಎಪಿಎಲ್ ಕುಟುಂಬಗಳಿಗೆ ನೀಡಲಾಗುತ್ತಿದ್ದ ಶೇ.70ರಷ್ಟು ಉಚಿತ ಚಿಕಿತ್ಸಾ ಸೌಲಭ್ಯವನ್ನು ಶೇ.30ಕ್ಕೆ ಇಳಿಸಲಾಗಿದೆ. ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಜಾರಿಗೊಳಿಸಿದ್ದ ಈ ಸೌಲಭ್ಯವನ್ನು ಮತ್ತೆ ಪರಿಶೀಲಿಸುವ ಚಿಂತನೆ ಇದೆ. ಸರ್ಕಾರಿ ಆಸ್ಪತ್ರೆಗಳ ಜನರಲ್ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುವ ಎಪಿಎಲ್ ಕುಟುಂಬಗಳಿಗೂ ಉಚಿತ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರ ಚರ್ಚಿಸುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

























































































