
ಶಬರಿಮಲೆ: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಇನ್ನು ಮುಂದೆ ಪಂಪಾ ನದಿಗೆ ಬಟ್ಟೆ, ಪ್ಲಾಸ್ಟಿಕ್ ಸೇರಿದಂತೆ ಯಾವುದೇ ತ್ಯಾಜ್ಯ ಎಸೆಯುವಂತಿಲ್ಲ. ನದಿ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಜಿಲ್ಲಾಡಳಿತ ಈ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ನಿಯಮ ಉಲ್ಲಂಘಿಸಿದರೆ 5 ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತದೆ.
ನವೆಂಬರ್ 22ರಂದು ಶಬರಿಮಲೆ ಹೆಚ್ಚುವರಿ ಜಿಲ್ಲಾಧಿಕಾರಿ ದಿಲೀಪ್ ಕೆ. ಕೈನ್ನಿಕ್ಕರ ಈ ಆದೇಶ ಹೊರಡಿಸಿದ್ದಾರೆ. ಪಂಪಾ ನದಿಯ ಜೊತೆಗೆ ಅದರ ಉಪನದಿಗಳು, ಸ್ನಾನಘಟ್ಟಗಳು ಹಾಗೂ ನದಿ ತೀರದ ಸಾರ್ವಜನಿಕ ಸ್ಥಳಗಳಿಗೂ ಈ ನಿಯಮ ಅನ್ವಯವಾಗಲಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) 2023ರ ಸೆಕ್ಷನ್ 163 ಹಾಗೂ ಕೇರಳ ಪಂಚಾಯತ್ ರಾಜ್ ಕಾಯ್ದೆಯಡಿ ಆದೇಶ ಜಾರಿಯಾಗಿದೆ. ದಂಡದ ಮೊತ್ತವನ್ನು 15 ದಿನಗಳೊಳಗೆ ಪಾವತಿಸದಿದ್ದರೆ ಸಂಬಂಧಿತ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಕರ್ತವ್ಯ ನಿರತ ಮ್ಯಾಜಿಸ್ಟ್ರೇಟ್, ಪೊಲೀಸ್ ವಿಶೇಷ ಅಧಿಕಾರಿ ಹಾಗೂ ಗ್ರಾಮ ಪಂಚಾಯತ್ ಕಾರ್ಯದರ್ಶಿಗೆ ನಿಯಮ ಜಾರಿಗೊಳಿಸುವ ಅಧಿಕಾರ ನೀಡಲಾಗಿದೆ. ಈ ಆದೇಶ ಎರಡು ತಿಂಗಳ ಕಾಲ ಜಾರಿಯಲ್ಲಿರಲಿದೆ.
ಮೂರು ದಿನಗಳಲ್ಲಿ 23 ಟನ್ ಬಟ್ಟೆ ತ್ಯಾಜ್ಯ ತೆರವು:
ಶಬರಿಮಲೆ ಯಾತ್ರೆಯ ವೇಳೆ ಭಕ್ತರು ಪಂಪಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ ಬಳಿಕ ಒದ್ದೆಯಾದ ಬಟ್ಟೆಗಳನ್ನು ನದಿಯಲ್ಲೇ ಬಿಟ್ಟು ಹೋಗುತ್ತಿರುವುದರಿಂದ ಮಾಲಿನ್ಯ ಹೆಚ್ಚುತ್ತಿದೆ. ಈ ಬಾರಿಯ ಮಂಡಲ ಯಾತ್ರೆಯ ಮೊದಲ ಮೂರು ದಿನಗಳಲ್ಲೇ ಸುಮಾರು 23 ಟನ್ ಬಟ್ಟೆ ತ್ಯಾಜ್ಯವನ್ನು ನದಿಯಿಂದ ತೆರವುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಪಂಪಾ ನದಿ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿದೆ. ತ್ಯಾಜ್ಯ ಎಸೆಯುವುದರಿಂದ ನೀರು ಕಲುಷಿತಗೊಳ್ಳುವುದರ ಜೊತೆಗೆ ಜಲಜನ್ಯ ಕಾಯಿಲೆಗಳ ಹರಡುವಿಕೆಯ ಆತಂಕವೂ ಎದುರಾಗಿದೆ.
ಭಕ್ತರಲ್ಲಿ ಜಾಗೃತಿ ಮೂಡಿಸಲು ಹೈಕೋರ್ಟ್ ಸೂಚನೆ
ಪಂಪಾ ನದಿಯ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಭಕ್ತರಲ್ಲಿ ಜಾಗೃತಿ ಮೂಡಿಸುವಂತೆ ಕೇರಳ ಹೈಕೋರ್ಟ್ ಸೂಚಿಸಿದೆ. ಶಬರಿಮಲೆಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಧ್ವನಿವರ್ಧಕಗಳ ಮೂಲಕ ಮಾಲಿನ್ಯ ತಡೆ ಸಂದೇಶಗಳನ್ನು ಪ್ರಸಾರ ಮಾಡುವಂತೆ ನಿರ್ದೇಶಿಸಿದೆ. ದೇವಸ್ವಂ ಮಂಡಳಿಯೂ ನದಿ ಸ್ವಚ್ಛತೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವ ಕ್ರಮ ಕೈಗೊಂಡಿದೆ.
ನವೆಂಬರ್‌ನಿಂದ ಜನವರಿವರೆಗೆ ನಡೆಯುವ ಮಂಡಲ-ಮಕರವಿಳಕ್ಕು ಯಾತ್ರೆಗೆ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಪಂಪಾ ನದಿಯಲ್ಲಿ ಪವಿತ್ರ ಸ್ನಾನ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಹೀಗಾಗಿ ನದಿಗೆ ಬಟ್ಟೆ ಹಾಗೂ ಇತರ ತ್ಯಾಜ್ಯಗಳನ್ನು ಎಸೆಯದೆ, ನಿಗದಿತ ಸ್ಥಳಗಳಲ್ಲಿ ವಿಲೇವಾರಿ ಮಾಡುವಂತೆ ಜಿಲ್ಲಾಡಳಿತ ಭಕ್ತರಲ್ಲಿ ಮನವಿ ಮಾಡಿದೆ.

























































































