
ಮುಂಬೈ (ಮಹಾರಾಷ್ಟ್ರ): ಸಣ್ಣ ಪಟ್ಟಣಗಳು ಹಾಗೂ ಗ್ರಾಮೀಣ ಪ್ರದೇಶಗಳ ವ್ಯಾಪಾರಿಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶದಿಂದ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ‘ಯುಪಿಐ ವ್ಯಾಪಾರ ಸಕ್ಷಮ್’ ಎಂಬ ಹೊಸ ಪ್ರೋತ್ಸಾಹ ಧನ ಯೋಜನೆಯನ್ನು ಪರಿಚಯಿಸಿದೆ. ಮೂರು ವರ್ಷಗಳ ಅವಧಿಯ ಈ ಯೋಜನೆಯಡಿ ಅರ್ಹ ವ್ಯಾಪಾರಿಗಳಿಗೆ ಕ್ಯೂಆರ್ ಕೋಡ್ ಅಳವಡಿಕೆಗೆ ₹ 300 ಹಾಗೂ ಸೌಂಡ್ಬಾಕ್ಸ್ ಅಳವಡಿಕೆಗೆ ₹ 750 ಪ್ರೋತ್ಸಾಹ ಧನ ನೀಡಲಾಗುತ್ತದೆ.
ವಹಿವಾಟು ಹೆಚ್ಚಳಕ್ಕೂ ಹೆಚ್ಚುವರಿ ಬೋನಸ್
ಹೊಸ ವ್ಯಾಪಾರಿಗಳನ್ನು ಡಿಜಿಟಲ್ ಪಾವತಿ ವ್ಯವಸ್ಥೆಗೆ ತರುವ ನಿಟ್ಟಿನಲ್ಲಿ ಬ್ಯಾಂಕ್ಗಳು ಮತ್ತು ಪಾವತಿ ಸೇವಾ ಸಂಸ್ಥೆಗಳ ಮೂಲಕ ಈ ಪ್ರೋತ್ಸಾಹ ಧನ ವಿತರಿಸಲಾಗುತ್ತದೆ. ಇದರ ಜೊತೆಗೆ, ₹ 2,000 ವರೆಗಿನ ಅರ್ಹ ಯುಪಿಐ ವಹಿವಾಟುಗಳಲ್ಲಿ ಪ್ರತಿ ತ್ರೈಮಾಸಿಕ ಶೇ. 5ರಷ್ಟು ಬೆಳವಣಿಗೆ ದಾಖಲಿಸುವ ವ್ಯಾಪಾರಿಗಳಿಗೆ ಹೆಚ್ಚುವರಿ ಪ್ರೋತ್ಸಾಹ ಧನವೂ ದೊರೆಯಲಿದೆ.
ಎಂಡಿಆರ್ ಆದಾಯದಿಂದ ಯೋಜನೆಗೆ ನಿಧಿ
ಈ ಯೋಜನೆಗೆ ಪ್ರತ್ಯೇಕ ಸರ್ಕಾರಿ ಅನುದಾನ ಬಳಸದೆ, ಬ್ಯಾಂಕ್ಗಳು ಮತ್ತು ಪಾವತಿ ಆ್ಯಪ್ಗಳು ಗಳಿಸುವ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಆದಾಯದ ಶೇ. 5ರಷ್ಟನ್ನು ನಿಧಿಯಾಗಿ ಮೀಸಲಿಡಲಾಗುತ್ತದೆ. ಯುಪಿಐ ಎಂಡಿಆರ್ ಶುಲ್ಕ ಅಧಿಕೃತವಾಗಿ ಜಾರಿಗೆ ಬಂದ ದಿನದಿಂದ ಮುಂದಿನ ಮೂರು ವರ್ಷಗಳವರೆಗೆ ಯೋಜನೆ ಅನುಷ್ಠಾನದಲ್ಲಿರಲಿದೆ.
ಯಾರಿಗೆ ಸಿಗಲಿದೆ ಯೋಜನೆಯ ಲಾಭ?
ಹಿಂದಿನ ಹಣಕಾಸು ವರ್ಷದಲ್ಲಿ ₹ 40 ಲಕ್ಷದವರೆಗೆ ವಾರ್ಷಿಕ ವಹಿವಾಟು ನಡೆಸಿದ ಸಣ್ಣ ವ್ಯಾಪಾರಿಗಳು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಟಯರ್-3ರಿಂದ ಟಯರ್-6 ನಗರಗಳು, ಈಶಾನ್ಯ ರಾಜ್ಯಗಳು, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಪ್ರದೇಶಗಳ ವ್ಯಾಪಾರಿಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಇತರ ಯೋಜನೆಗಳಡಿ ನೋಂದಾಯಿತ ವ್ಯಾಪಾರಿಗಳೂ ಇದರ ಪ್ರಯೋಜನ ಪಡೆಯಬಹುದು.
ಪ್ರೋತ್ಸಾಹ ಧನ ಪಡೆಯಲು ವ್ಯಾಪಾರಿಗಳು ಮೂರು ತಿಂಗಳ ಅವಧಿಯಲ್ಲಿ ಕನಿಷ್ಠ ಎರಡು ತಿಂಗಳು ತಲಾ 25 ಅರ್ಹ ಯುಪಿಐ ವಹಿವಾಟುಗಳನ್ನು ನಡೆಸಿರಬೇಕು. ಅಲ್ಲದೆ, ಪ್ರತಿ ತಿಂಗಳು ಕನಿಷ್ಠ ₹ 5,000 ವಹಿವಾಟು ದಾಖಲಿಸುವುದು ಕಡ್ಡಾಯವಾಗಿದೆ.






















































































