ಅಮಾಯಕನಿಗೆ 30 ತಿಂಗಳು ಜೈಲು ಶಿಕ್ಷೆ!

ಮಂಡ್ಯ: ಕೊಲೆ ಮಾಡಲಾಗಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಮಹಿಳೆಯೊಬ್ಬರು ಏಳು ವರ್ಷಗಳ ಬಳಿಕ ಜೀವಂತವಾಗಿ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಕೊಲೆ ಆರೋಪ ಎದುರಿಸಿದ್ದ ಅಮಾಯಕ ಯುವಕನೊಬ್ಬ ಸುಮಾರು 30 ತಿಂಗಳು ಜೈಲಿನಲ್ಲಿ ಕಳೆದಿರುವುದು ಪೊಲೀಸ್ ತನಿಖೆಯ ಗಂಭೀರ ಲೋಪವನ್ನು ಎತ್ತಿತೋರಿಸಿದೆ.
2019ರ ಜೂನ್ನಲ್ಲಿ ಪಾಂಡವಪುರದಿಂದ ನಾಪತ್ತೆಯಾಗಿದ್ದ ಮಂಜು ಎನ್. ಎಂಬ ಮಹಿಳೆ ಬುಧವಾರ ನಾಗಮಂಗಲ ತಾಲೂಕಿನ ಮಾಯಿಗೋನಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿದ್ದಾರೆ. ಚಾಮರಾಜನಗರ ಮೂಲದ ನಾಗೇಂದ್ರ ಎಂಬುವವರನ್ನು ವಿವಾಹವಾಗಿರುವ ಅವರು, ಅವರೊಂದಿಗೆ ವಾಸಿಸುತ್ತಿದ್ದರು.
ಮಂಜು ಕೊಲೆ ಆರೋಪದಡಿ ಬಂಧನಕ್ಕೊಳಗಾಗಿ ಎರಡೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ರಾಗಿಮುದ್ದನಹಳ್ಳಿ ಗ್ರಾಮದ ರಾಜೇಶ್ ಎಂ.ಆರ್. ಅಲಿಯಾಸ್ ಕಾಳ ಅವರಿಗೆ ಇದೀಗ ದೊಡ್ಡ ನಿರಾಳ ಸಿಕ್ಕಿದೆ.
ಕುಟುಂಬದವರು ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಲು ಮುಂದಾಗಿದ್ದರಿಂದ ಮನೆ ತೊರೆದಿದ್ದಾಗಿ ಮಂಜು ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ನಾಗೇಂದ್ರ ಅವರನ್ನು ಮದುವೆಯಾಗಿ ಸುಮಾರು ಒಂದು ವರ್ಷ ತಮಿಳುನಾಡಿನಲ್ಲಿ ವಾಸವಿದ್ದು, ನಂತರ ಮಾಯಿಗೋನಹಳ್ಳಿಗೆ ಬಂದಿರುವುದಾಗಿ ಹೇಳಿದ್ದಾರೆ. ಅಲ್ಲದೆ, ರಾಜೇಶ್ ಎಂಬ ವ್ಯಕ್ತಿಯ ಪರಿಚಯವೇ ತನಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಏನಿದು ಪ್ರಕರಣ?
2019ರ ಜೂನ್ನಲ್ಲಿ ಮಂಜು (35) ಪಾಂಡವಪುರ ಪಟ್ಟಣದಿಂದ ಕಾಣೆಯಾಗಿದ್ದರು. ಈ ಕುರಿತು ಅವರ ತಂದೆ ನಾಗರಾಜು ನಾಪತ್ತೆ ದೂರು ದಾಖಲಿಸಿದ್ದರು. ಎರಡು ವರ್ಷಗಳ ಬಳಿಕ ರಾಜೇಶ್ ತಮ್ಮ ಮಗಳನ್ನು ಕೊಲೆ ಮಾಡಿ ಕಾವೇರಿ ನದಿಗೆ ಎಸೆದಿದ್ದಾರೆ ಎಂದು ಆರೋಪಿಸಿ ನಾಗರಾಜು ಕೊಲೆ ದೂರು ನೀಡಿದ್ದರು.
ಮಂಜು ನಾಪತ್ತೆಯಾಗುವ ದಿನ ಪಾಂಡವಪುರ ಬಸ್ ನಿಲ್ದಾಣದಲ್ಲಿ ರಾಜೇಶ್ ಅವರ ಮೊಬೈಲ್ ಪಡೆದು ಕೊನೆಯ ಕರೆ ಮಾಡಿದ್ದರು. ಈ ಕರೆಯ ದಾಖಲೆ (CDR) ಆಧರಿಸಿ 2021ರಲ್ಲಿ ಪೊಲೀಸರು ರಾಜೇಶ್ ಅವರನ್ನು ಬಂಧಿಸಿದ್ದರು. ಸುಮಾರು 30 ತಿಂಗಳು ಜೈಲಿನಲ್ಲಿದ್ದ ಅವರು 2024ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಇತ್ತೀಚೆಗೆ ರಾಜೇಶ್ ಪರ ವಕೀಲ ನಟೇಶ್ ಅವರಿಗೆ ದೊರೆತ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದಾಗ ಮಂಜು ನಾಗಮಂಗಲ ತಾಲೂಕಿನ ಮಾಯಿಗೋನಹಳ್ಳಿಯಲ್ಲಿ ಜೀವಂತವಾಗಿರುವುದು ಪತ್ತೆಯಾಗಿದೆ.
ಪೊಲೀಸರ ವಿರುದ್ಧ ಹಲ್ಲೆಯ ಆರೋಪ; ತನಿಖೆಗೆ ಆದೇಶ
ಮಹಿಳೆ ಜೀವಂತವಾಗಿ ಪತ್ತೆಯಾದ ಬಳಿಕ ರಾಜೇಶ್, ಅಂದಿನ ಪಾಂಡವಪುರ ಪೊಲೀಸ್ ಇನ್ಸ್ಪೆಕ್ಟರ್ ಪ್ರಭಾಕರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸುಳ್ಳು ತಪ್ಪೊಪ್ಪಿಗೆ ಪಡೆಯಲು ಪೊಲೀಸರು ಹಲ್ಲೆ ನಡೆಸಿ, ಖಾಸಗಿ ಅಂಗಗಳಿಗೆ ವಿದ್ಯುತ್ ಶಾಕ್ ನೀಡಿದ್ದರು ಎಂದು ಆರೋಪಿಸಿದ್ದಾರೆ.
ಪ್ರಸ್ತುತ ಮಂಜು ಅವರನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ಹಿಂದಿನ ತನಿಖೆಯಲ್ಲಿ ನಡೆದಿರುವ ಲೋಪಗಳ ಕುರಿತು ಪರಿಶೀಲಿಸಲು ಶ್ರೀರಂಗಪಟ್ಟಣ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಮಂಡ್ಯ ಎಸ್ಪಿ ಡಾ. ವಿ.ಜೆ. ಶೋಭಾರಾಣಿ ಆದೇಶಿಸಿದ್ದಾರೆ.
ಮಗನಿಗೆ ರಕ್ಷಣೆ ನೀಡುವಂತೆ ತಂದೆ ಮನವಿ
ಮಂಜು ಜೀವಂತವಾಗಿ ಪತ್ತೆಯಾದ ಹಿನ್ನೆಲೆಯಲ್ಲಿ ರಾಜೇಶ್ ಅವರ ತಂದೆ ರಮೇಶ್ ಬಿಂಡಿಗನವಿಲೆ ಪೊಲೀಸ್ ಠಾಣೆಗೆ ತೆರಳಿ ಮಗನಿಗೆ ರಕ್ಷಣೆ ಹಾಗೂ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ಕೊಲೆ ಆರೋಪ ಎದುರಿಸಿದ್ದ ಮಹಿಳೆ ಜೀವಂತವಾಗಿರುವ ಸಂಗತಿಯನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ.






















































































