ಭಾಗ – 689
ಭರತೇಶ ಶೆಟ್ಟಿ,ಎಕ್ಕಾರು

ಧರ್ಮರಾಯ ವಿದುರನನ್ನು ಹಿಂಬಾಲಿಸಿ ತನಗಾಗುವಷ್ಟು ಬೇಗ ಬೇಗನೆ ಹೋಗುತ್ತಿದ್ದಾನೆ. ಸನಿಹವಾಗುತ್ತಿದ್ದಂತೆ ಚಿತ್ರಣ ಸ್ಪಷ್ಟವಾಗುತ್ತಿದೆ. ಕೃಶವಾದ ಶರೀರ ಎಲುಬಿನ ಹಂದರಕ್ಕೆ ಚರ್ಮದ ಹೊದಿಕೆ ಹೊದ್ದಂತಿದೆ. ನರ ನಾಡಿಗಳೆಲ್ಲ ಎದ್ದು ಕಾಣಿಸುತ್ತಿವೆ. ಜಟಾಧಾರಿಯಾಗಿ, ಸುಕ್ಕುಗಟ್ಟಿ ಜೋತು ಬಿದ್ದ ಚರ್ಮದ ಕಾಯ, ದಿಗಂಬರನಾಗಿ ಮೃತ್ತಿಕೆ ಮೆತ್ತಿಕೊಂಡಿರುವ ಅಂಗಾಂಗಗಳು, ಕಾನನದ ಧೂಳು ಮುಚ್ಚಿ ಹೋಗಿರುವ ಮೈ ಕೈ… ಹೀಗೆ ವಿದುರನನ್ನು ಅಪಾದಮಸ್ತಕವಾಗಿ ಅವಲೋಕಿಸುತ್ತಾ ತಪಸ್ಶಕ್ತಿಯ ತೀವ್ರತೆ ದೇಹವನ್ನು ಅದ್ಯಾವ ತೆರನಾಗಿ ದಹಿಸಿದೆ ಎಂದು ಅರ್ಥ ಮಾಡಿಕೊಳ್ಳತೊಡಗಿದನು. ಅನುಸರಿಸಿ ಓಡುತ್ತಾ ದಣಿದಾಗ “ನಿಲ್ಲಿ ನಿಲ್ಲಿ…ನಾನು ನಿಮ್ಮ ಪ್ರೀತಿಯ ಯುಧಿಷ್ಠಿರಾ…” ಎಂದು ಕೂಗಿ ಕರೆದರೂ ಏನೂ ಪ್ರಯೋಜನವಾಗಲಿಲ್ಲ. ಎದುರಿರುವಾತನ ವೇಗ ಹೆಚ್ಚುತ್ತಲಿದೆ. ಜೊತೆಯಲ್ಲಿ ಧರ್ಮರಾಯನ ಆವೇಗವೂ ಏರುತ್ತಿದೆ. ಇದು ನನ್ನ ಮಂತ್ರಿವರ, ನನ್ನ ಚಿಕ್ಕಪ್ಪನಾದ ವಿದುರ ಹೌದೊ ಅಲ್ಲವೊ ಎಂಬಷ್ಟು ಸಂದೇಹ ಧರ್ಮರಾಯನಿಗೆ ಆಗತೊಡಗಿತು. ನನ್ನವರಾದ ವಿದುರ ಮಹಾಶಯರು ಇವರಾಗಿದ್ದರೆ ನನ್ನ ಕೂಗು ಕೇಳಿಯೂ ನಿಲ್ಲದೆ ಹೋಗಲು ಸಾಧ್ಯವಿಲ್ಲ. ಹೌದೊ! ಅಲ್ಲವೊ? ಎಂಬಷ್ಟು ಗೊಂದಲ ಮೂಡಿತು. ಸೂಕ್ಷ್ಮ ಮತಿಯಾದ ಧರ್ಮರಾಯ ಪರಿಶೀಲಿಸಿ ನೋಡುತ್ತಾ ಬೆಂಬತ್ತಿದನು. ಮಹಾ ಬುದ್ಧಿಶಾಲಿಯಾದ ಯುಧಿಷ್ಠಿರ ಕೊನೆಗೂ ಗುರುತು ಹಿಡಿದು ಬಿಟ್ಟನು! ಹೌದು ಇದು ಅವರೇ! ಮಹಾ ಧರ್ಮಾತ್ಮ ವಿದುರ. ಅರಿತು, ಅರಿಯದೆ ಯಾವ ವಿಧಾನದಿಂದಲೂ ಅಧರ್ಮವನ್ನು ಮಾಡದ ಮಹಾಧಾರ್ಮಿಕ ವಿದುರ. ನಮ್ಮ ಮಹಾಮಂತ್ರಿ. ಪುರದ, ವಂಶದ ಹಿತ ಚಿಂತಕ ವಿದುರ, ಹೌದೆಂದು ಧರ್ಮಜನಿಗೆ ಖಾತ್ರಿಯಾಯಿತು. ಮನವರಿಕೆಯಾದ ಕೂಡಲೆ ಧರ್ಮರಾಯನ ವೇಗ ಇಮ್ಮಡಿ ಮುಮ್ಮಡಿಯಾಯಿತು. ವಿದುರನನ್ನು ಬೆಂಬತ್ತಿ, ಹಿಂದಿಕ್ಕಿ ತಾನು ಮುಂದಕ್ಕೆ ಸಾಗಿದನು. ನಾಲ್ಕಾರು ಹೆಜ್ಜೆ ಮುಂದೆ ಹೋಗಿ ತಿರುಗಿ ಎದುರಾಗಿ ನಿಂತನು. “ಮಹಾತ್ಮರೆ! ನಿಮ್ಮವನಾದ ಯುಧಿಷ್ಠಿರ. ಕೃಪೆದೋರಿ ನಿಲ್ಲಬೇಕು.” ಎಂದು ವಿನಂತಿಸಿದಾಗ ಚಲಿಸುತ್ತಲಿದ್ದ ಋಷಿಪುತ್ರನ (ವ್ಯಾಸರ ಮಗ ಎಂಬ ಅರ್ಥದಲ್ಲಿ) ಪಾದಗಳು ಧರ್ಮರಾಯನ ಸನಿಹದಲ್ಲಿ ನಿಂತವು.
ವಿದುರ ಏನೂ ಮಾತನಾಡಲಿಲ್ಲ. ದೃಷ್ಟಿ ತಾನು ಸಾಗುವ ದಾರಿಯನ್ನಷ್ಟೆ ನೋಡುತ್ತಿದೆ. ಕಾಲುಗಳು ಯಾವುದೊ ಗಮ್ಯ ನಿರ್ಧರಿಸಿಯಾಗಿದೆ ಎಂಬಂತೆ ಎಲ್ಲೊ ಸೇರಲು ಅವಸರಿಸುವಂತೆ ಸಾಗುತ್ತಿದ್ದರೂ ಈ ಕ್ಷಣ ನಿಂತಿವೆ. ನೆಲ ನೋಡುತ್ತಿದ್ದ ಕಂಗಳು ಮುಂದೆ ಮುಂದೆ ಹಾಯಿಸುತ್ತಾ ಧರ್ಮರಾಯನ ಪಾದ ನೋಡಿದವು. ಏರುತ್ತಾ ಸೊಂಟ ಎದೆ ಕಂಠ, ಮುಖ ಕಣ್ಣುಗಳನ್ನು ನೋಡಿದವು. ಈಗ ವಿದುರನ ಕಂಗಳೂ ಧರ್ಮಜನ ಕಣ್ಣುಗಳೂ ಎವೆಯಿಕ್ಕದೆ ದೃಷ್ಟಿಯುದ್ಧ ನಿರತವಾದಂತೆ ತಟಸ್ಥವಾಗಿವೆ. ಇಬ್ಬರೂ ಏಕಾಗ್ರಚಿತ್ತರಾಗಿದ್ದಾರೆ. ನೋಡ ನೋಡುತ್ತಿದ್ದಂತೆಯೆ ವಿದುರನ ದೃಷ್ಟಿ ಯುಧಿಷ್ಠಿರನ ದೃಷ್ಟಿಯನ್ನು ಸೇರಿಕೊಂಡಿತು. ಧೀಮಂತನಾದ ವಿದುರನ ಅಂಗಾಂಗಗಳು ಒಂದೊಂದಾಗಿ ಧರ್ಮಜನ ಅಂಗಾಂಗಗಳಲ್ಲಿಯೂ, ಪ್ರಾಣ ಧರ್ಮರಾಯನ ಪ್ರಾಣದಲ್ಲಿಯೂ, ಇಂದ್ರಿಯಗಳು ಇಂದ್ರಿಯಗಳಲ್ಲಿಯೂ ಐಕ್ಯವಾದವು. ತಪ ಶಕ್ತಿಯ ಯೋಗಬಲವನ್ನು ಆಶ್ರಯಿಸಿದ್ದ ವಿದುರ ಪ್ರಜ್ವಲಿಸತೊಡಗಿದ್ದಾನೆ. ತೇಜಸ್ಸಿನ ಪ್ರಭೆ ಹೊಳೆಯುತ್ತಿದೆ. ಆತ್ಮಜ್ಯೋತಿ ಭೌತಿಕವಾದ ಶರೀರದಿಂದ ಹೊರ ಹೊಮ್ಮಿತು. ಧರ್ಮರಾಯನಲ್ಲಿ ಲೀನವಾಯಿತು. ಅಂದರೆ ಪೂರ್ತಿಯಾಗಿ ವಿದುರ ಧರ್ಮರಾಯನ ಶರೀರವನ್ನು ಪ್ರವೇಶಿಸಿದನು. ಈಗ ದಹನಯೋಗ್ಯವಾದ ವಿದುರನದ್ದಾಗಿದ್ದ ದೇಹ ಹೊರಗೆ ಉಳಿದಿದೆ. ಚೈತನ್ಯವೆಲ್ಲ ಸ್ಥಿತ್ಯಂತರಗೊಂಡಿದೆ. ವಿದುರನ ಶರೀರಾಕೃತಿ ಮೊದಲಿದ್ದಂತೆ ಅದೇ ನಿಲುಮೆಯಿಂದ ಎದುರಿನಲ್ಲಿ ನಿಂತಿದೆ. ಯೋಗಿಯಾಗಿದ್ದ ವಿದುರ ಯೋಗಬಲದಿಂದ ಧರ್ಮಜನೊಳಗೆ ಸೇರಿಯಾಗಿದೆ. ಎರಡು ಒಂದಾಗಿರುವ ಸಮ್ಮಿಳಿತ ಸ್ವರೂಪ ಧರ್ಮರಾಯ ಮಾತ್ರವಾಗಿ ಉಳಿದಿದೆ. ವಿದುರನ ಕಾಯ ನಿಶ್ಚಲವಾಗಿದೆ. ಕಣ್ಣುಗಳು ಸ್ತಬ್ಧವಾಗಿವೆ. ಉಸಿರು ನಿಂತಿದೆ, ಪ್ರಾಣ ಪ್ರಯಾಣ ಮಾಡಿ ಸೇರಬೇಕಾದಲ್ಲಿಗೆ ಸೇರಿಕೊಂಡಿದೆ.
ಗತಚೇತನನಾದ ವಿದುರನ ರೂಪವನ್ನು ಯುಧಿಷ್ಠಿರ ನೋಡುತ್ತಿದ್ದಾನೆ. ತನ್ನೊಳಗೆ ಆದ ಪರಿವರ್ತನೆ ಗಮನಿಸುತ್ತಿದ್ದಾನೆ. ತಾನೀಗ ಬಲಿಷ್ಠನೂ, ಬಹುಗುಣವಂತನೂ, ಮಹಾ ತೇಜಸ್ವಿಯೂ ಆಗಿರುವುದನ್ನು ಅರಿತನು.
ಹೀಗೆ ವಿಶೇಷ ಅನುಭವವಾಗುತ್ತಿರುವಾಗ ಮಹಾಜ್ಞಾನಿಯಾದ ಧರ್ಮಮೂರ್ತಿ ಯುಧಿಷ್ಠಿರ ತನ್ನ ಸಮಸ್ತವಾದ ಪುರಾಣರೂಪವನ್ನು ಕುರಿತು ಯೋಚಿಸತೊಡಗಿದನು. ನಾನು ಯಾರು? ವಿದುರ ಯಾರು? ಯಾಕೆ ಈ ವಿಲೀನ? ಅದು ಹೇಗಾಯಿತು? ಎಂಬ ಸತ್ಯದ ದರ್ಶನವಾಗತೊಡಗಿತು.
ಮುಂದುವರಿಯುವುದು…






















































































