
ಚಿತ್ರದುರ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ‘ನನ್ನ ತಲೆಯ ಹೇರ್ ಕಟ್ ಮಾಡುವವರು ಫ್ರೀಯಾಗಿಲ್ಲ. ಒಂದು ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಫ್ರೀಯಾಗಿದ್ದರೆ ಬಂದು ಕಟಿಂಗ್ ಮಾಡಲಿ’ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ. ವಿಜಯೇಂದ್ರ ಭ್ರಮೆಯಲ್ಲಿದ್ದಾರೆ. ವಿಜಯೇಂದ್ರ ಅವರ ಅಪ್ಪ ಮುಖ್ಯಮಂತ್ರಿ ಆಗಿದ್ದರೆಂಬ ಭ್ರಮೆಯಲ್ಲಿದ್ದಾರೆ. ಕೂಡಲೇ ವಿಜಯೇಂದ್ರ ಅವರು ಭ್ರಮೆಯಿಂದ ಹೊರ ಬರಬೇಕು. ಬಿಜೆಪಿ ರಾಜ್ಯಾದ್ಯಕ್ಷರಾಗಿ ಏನು ಮಾಡಬೇಕು ಯೋಚಿಸಲಿ. ಚಿತ್ರರಂಗದ ಬಗ್ಗೆ ವಿಜಯೇಂದ್ರ ಮಾತಾಡುವ ಅಗತ್ಯ ಇಲ್ಲ ಎಂದು ಟೀಕಿಸಿದರು.
ವಿಜಯೇಂದ್ರ ಅವರ ಹಣೆಬರಹ ಜೂನ್ 4ಕ್ಕೆ ಬರುತ್ತದೆ ಆಗ ನೋಡಿಕೊಳ್ಳಲಿ. ನನ್ನ ಹಣೆಬರಹ ನಾನು ನೋಡಿಕೊಳ್ಳುತ್ತೇನೆ, ತೊಂದರೆಯಿಲ್ಲ. ಇಷ್ಟು ವರ್ಷ ಬಿಜೆಪಿ ಹೊಲಸು ಮಾಡಿದ್ದನ್ನು ನಾವು ಸರಿ ಮಾಡುತ್ತಿದ್ದೇವೆ. ಪಠ್ಯ ಪರಿಷ್ಕರಣೆ ಪ್ರಣಾಳಿಕೆಯಲ್ಲಿ ಹೇಳಿದಂತೆ ಮಾಡಿದ್ದೇವೆ.
ಸಾಮಾನ್ಯವಾಗಿ ಶಾಲೆಗೆ ಮಕ್ಕಳು ಉತ್ತಮ ಬಟ್ಟೆ ಧರಿಸಿ, ಕೂದಲನ್ನು ಸಣ್ಣದಾಗಿ ಕಟ್ಟಿಂಗ್ ಮಾಡಿಸಿಕೊಂಡು ತಲೆಗೆ ಎಣ್ಣೆ ಹಚ್ಚಿಕೊಂಡು ತಲೆ ಬಾಚಿಕೊಂಡು ಬರುತ್ತಾರೆ. ಆದರೆ, ಸ್ವತಃ ಶಿಕ್ಷಣ ಸಚಿವರೇ ಶಾಲೆಗೆ ಬರುತ್ತಾರೆಂದರೆ ಶಿಕ್ಷಕರು ಅವರಿಗೆ ತಲೆ ಬಾಚಿಕೊಂಡು ಬನ್ನಿ ಎನ್ನುವಂತಾಗಿದೆ. ಜೊತೆಗೆ, ಶಿಕ್ಷಣ ಇಲಾಖೆಯನ್ನು ಹೊಂದಿದ ಶಿಕ್ಷಣ ಸಚಿವರು ವಿಧಾನಸಭೆಗೆ ಬರುವಾಗಲೇ ನೀವು ತಲೆ ಬಾಚಿಕೊಂಡು ಬನ್ನಿ ಎಂದು ಹೇಳುವಂತಹ ಪರಿಸ್ಥಿತಿ ಬಂದಿದೆ. ಅವರಿಗೆ ಕಟ್ಟಿಂಗ್ ಮಾಡಿಸಿಕೊಂಡು ಬರಲು ಹೇಳಬೇಕು. ಅವರಿನ್ನೂ ಚಿತ್ರರಂಗದಲ್ಲಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಅದರಿಂದ ಹೊರಬರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕೆ ಮಾಡಿದ್ದರು.